ಬಂಟ್ವಾಳ: ಕಳೆದ 2 ವರ್ಷಗಳಿಂದ ವಿದ್ಯುತ್ ಬೆಳಕಿಲ್ಲದೆ ಪರಿತಪಿಸುತ್ತಿದ್ದ ಬಡ ಕುಟುಂಬಕ್ಕೆ ಸೋಲಾರ್ ಬೆಳಕನ್ನು ನೀಡುವ ಮೂಲಕ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಮಾನವೀಯತೆ ಮೆರೆದಿದೆ.
ಸಂಗಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗರ್ಲಚ್ಚಿಲ್ ಎಂಬಲ್ಲಿ ಸಣ್ಣ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಚಂದಪ್ಪ ನಾಯ್ಕ್ ದಂಪತಿಗಳ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆ ಪಡುತ್ತಿದ್ದರು. ಸಣ್ಣ ಚಾರ್ಜರ್ ಲೈಟನ್ನು ಪ್ರತಿನಿತ್ಯ ತನ್ನ ತಮ್ಮನ ಮನೆಯಲ್ಲಿ ಚಾರ್ಜ್ಗೊಳಿಸಿ ಅದರ ಬೆಳಕಿನಲ್ಲಿ ರಾತ್ರಿ ಕಳೆಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿದ್ದಕಟ್ಟೆ ಸರಕಾರಿ ಕಾಲೇಜಿನ ವಿದ್ಯಾರ್ಥಿ ಹಾಗೂ ರೋಟಾರ್ಯಾಕ್ಟ್ ಕ್ಲಬ್ನ ಅಧ್ಯಕ್ಷ ಗುರುಪ್ರಸಾದ್ ಅವರು ರೋಟರಿ ಕ್ಲಬ್ ಅಧ್ಯಕ್ಷರ ಗಮನಕ್ಕೆ ತಂದಿದ್ದರು. ಇದೀಗ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್, ಕರ್ನಾಟಕ ಬ್ಯಾಂಕ್ ಹಾಗೂ ಸೆಲ್ಕೋ ಇಂಡಿಯಾದ ಆರ್ಥಿಕ ಸಹಕಾರದಲ್ಲಿ ಸೋಲಾರ್ ವಿದ್ಯುತ್ನ್ನು ಅಳವಡಿಸಲಾಗಿದ್ದು ಕುಟುಂಬ ಸದಸ್ಯರಲ್ಲಿ ಸಂತಸದ ನಗೆ ಮೂಡಿದೆ.
ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ.ನ ವ್ಯವಸ್ಥಾಪಕ ರವೀಣಾ ಬಿ., ಕ್ಲಬ್ ಸದಸ್ಯರಾದ ರಾಮಚಂದ್ರ ಶೆಟ್ಟಿಗಾರ್, ರಾಜೇಶ್ ಶೆಟ್ಟಿ, ರೋನಾಲ್ಡ್ ಮೋರಸ್, ಮೈಕಲ್ ಡಿಕೋಸ್ತಾ, ಸಂತೋಷ್ ಕುಮಾರ್, ಗುರುಪ್ರಸಾದ್ ಸೀತರಾಮ ಶೆಟ್ಟಿ, ಮನೆ ಯಜಮಾನಿ ಶಾಂತ ಉಪಸ್ಥಿತರಿದ್ದರು.