ಬಂಟ್ವಾಳ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿದೆ. ಕಾರ್ಯನಿರ್ವಹಣೆಯಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಾನದಲ್ಲಿದ್ದು ನಿರಂತರ ಪ್ರಗತಿಯನ್ನು ಸಾಥಿಸುತ್ತಾ ಬಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಹೇಳಿದರು.
ಅವರು ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಸೆ.೧೨ ರಂದು ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೀರ್ಘಾವಧಿ ಸಾಲ ವಿತರಣೆ , ನಿಶ್ಚಿತ ಠೇವಣಿ, ಉಳಿತಾಯ ಠೇವಣಿ, ನಿತ್ಯ ಭೂ ನಿಧಿ ಠೇವಣಿ ಸಂಗ್ರಹಿಸುವ ಮೂಲಕ ರೈತ ಸದಸ್ಯರಲ್ಲಿ ಉಳಿತಾಯ ಮನೋಭಾವನೆಯನ್ನು ಪ್ರೇರೇಪಿಸಿ ರೂ.೨೫ ಕೋಟಿಗೂ ಮಿಕ್ಕಿ ಸಾಲ ನೀಡಿರುತ್ತದೆ. ಮುಂದಿನ ವರ್ಷಗಳಲ್ಲಿ ರೈತ ಸದಸ್ಯರಿಗೆ ಅವಶ್ಯವಿರುವ ವಿವಿಧ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು. ೨೦೧೯-೨೦ ನೇ ಸಾಲಿನಲ್ಲಿ ಬ್ಯಾಂಕ್ ತನ್ನ ಕಾರ್ಯಕ್ಷೇತ್ರಗಳ ಎಲ್ಲಾ ಗ್ರಾಮಗಳ ರೈತರನ್ನು ಸದಸ್ಯರನ್ನಾಗಿಸಿ ಸಾಲ ನೀಡುವ ಮೂಲಕ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು. ನಿರ್ದೇಶಕರಾದ ಆಡಳಿತ ಮಂಡಳಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಹೊನ್ನಪ್ಪ ನಾಯ್ಕ , ಮುರಳಿಧರ ಶೆಟ್ಟಿ, ಪರಮೇಶ್ರವ ಎಮ್, ಚಂದ್ರಶೇಖರ ಶೆಟ್ಟಿ , ಶಿವಪ್ಪ ಪೂಜಾರಿ, ಸುಜಾತ ರೈ, ಪುಪ್ಪಾವತಿ ಉಪಸ್ಥಿತರಿದ್ದರು.
ಸಹಕಾರಿ ಯೂನಿಯನ್ನ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಇವರು ಸದಸ್ಯರ ಕರ್ತವ್ಯ ಹಾಗೂ ಹಕ್ಕುಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ರೈತರಿಗೆ ಮತ್ತು ಗ್ರಾಹಕರಿಗೆ ವಾಹನ ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಭೂ ಅಭೀವೃದ್ಧಿ ಬ್ಯಾಂಕ್ ಕಟ್ಟಡದ ಎದುರುಗಡೆ ಇರುವ ವಾಹನ ಪಾರ್ಕಿಂಗ್ ಸ್ಥಳಾಂತರಗೊಳಿಸುವಂತೆ ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ ಸ್ವಾಗತಿಸಿದರು. ವ್ಯವಸ್ಥಾಪಕ ಶೇಖರ ಎಮ್. ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ಚಂದ್ರಹಾಸ ಕರ್ಕೆರ ವಂದಿಸಿದರು. ಮಾಣಿ ಶಾಖಾ ವ್ಯವಸ್ಥಾಪಕ ಪದ್ಮನಾಭ ಜಿ. ನಿರೂಪಿಸಿದರು.
ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ವಾರ್ಷಿಕ ಮಹಾಸಭೆ
