ಬಂಟ್ವಾಳ: ಇಲ್ಲಿನ ಲೊರೆಟ್ಟೋ ಪದವಿನಲ್ಲಿರುವ ಲೊರೆಟ್ಟೋ ಮಾತಾ ಚರ್ಚ್ನಲ್ಲಿ ಕನ್ಯಾ ಮರಿಯಮ್ಮನವರ ಜನ್ಮದಿನದ ಪ್ರಯುಕ್ತ ಕ್ರೈಸ್ತ ಬಂಧುಗಳು ತೆನೆ ಹಬ್ಬವನ್ನು ಭಾನುವಾರ ವಿಜ್ರಂಬಣೆಯಿಂದ ಆಚರಿಸಿದರು. ಲೊರೆಟ್ಟೋ ಪದವುನಲ್ಲಿ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಬಳಿಕ ಕನ್ಯ ಮರಿಯಮ್ಮನವರ ವಿಗ್ರಹವನ್ನು ಅಲಂಕರಿಸಿದ ಪಲ್ಲಕಿಯಲ್ಲಿ ಮೆರವಣಿಗೆ ಮೂಲಕ ಚರ್ಚ್ಗೆ ಹೊತ್ತು ತರಲಾಯಿತು.
ಈ ಸಂದರ್ಭ ಮಕ್ಕಳು, ಮಹಿಳೆಯರು, ಹಿರಿಯರು ದೇವರ ಸ್ತುತಿಯೊಂದಿಗೆ ರಸ್ತೆಯುದ್ದಕ್ಕೂ ಪುಷ್ಪ ಸಮರ್ಪಿಸುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು. ಪೂಜೆಯಲ್ಲಿ ಪ್ರಧಾನ ಧರ್ಮ ಗುರುಗಳಾಗಿ ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕರಾದ ವಂದನೀಯ ರೋಕ್ವಿನ್ ಪಿಂಟೋ ರವರು ಕನ್ಯಾ ಮರಿಯಮ್ಮರವರ ಜನ್ಮದಿನದ ಸಂದೇಶ ನೀಡಿದರು. ಅವರೊಂದಿಗೆ ವಂದನೀಯ ದಿಲ್ರಾಜ್ ಹಾಗೂ ಲೊರೆಟ್ಟೋ ಚರ್ಚ್ ಧರ್ಮ ಗುರುಗಳಾದ ವಂದನೀಯ ಎಲಿಯಸ್ ಡಿಸೋಜಾ ಬಲಿ ಪೂಜೆಯನ್ನು ಅರ್ಪಿಸಿದರು.
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಭತ್ತದ ತೆನೆಯನ್ನು ವಿತರಿಸಲಾಯಿತು. ಚರ್ಚ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಹನಗಳನ್ನು ಮೈದಾನದಲ್ಲಿ ಸಾಲಾಗಿ ಪೂಜೆ ನೆರೆವೇರಿಸಲಾಯಿತು. ಬಳಿಕ ಉಪಹಾರ ಹಾಗೂ ಕಬ್ಬು ವಿತರಿಸಲಾಯಿತು.
ಕಥೋಲಿಕ್ ಸಭಾ ಲೋರೆಟ್ಟೋ ಘಟಕದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಚರ್ಚ್ನ ವಾಹನ ಚಾಲಕ – ಮಾಲಕ ಸಂಘ, ಚರ್ಚ್ ಪಾಲನಾ ಮಂಡಳಿಯು ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿತ್ತು.