ಬಂಟ್ವಾಳ: ಶ್ರೀರಾಮ ಭಜನಾ ಮಂದಿರ ಕಲ್ಲಡ್ಕ ಇದರ ಆಶ್ರಯದಲ್ಲಿ ನಡೆದ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಶೋಭಾ ಯಾತ್ರೆ ಮೆರವಣಿಗೆಯಲ್ಲಿ ಕಲ್ಲಡ್ಕ ಶ್ರೀರಾಮ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಕುಣಿತ ಭಜನೆ ಜನಮನ ಸೂರೆಗೊಂಡಿದೆ. ಭಜನೆ ಹಾಡಿಗೆ ರಾಜರಸ್ತೆಯಲ್ಲಿ ಹೆಜ್ಜೆ ಹಾಕಿದ ಶ್ರೀ ರಾಮ ಕಾಲೇಜು ವಿದ್ಯಾರ್ಥಿಗಳ ಭಕ್ತಿಯ ಕುಣಿತ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಗಣೇಶ ವಿಸರ್ಜನ ಮೆರವಣಿಗೆಯಲ್ಲಿ ಗೊಂಬೆ ಕುಣಿತ, ನಾಸಿಕ್ ಬ್ಯಾಂಡ್ಗಳ ಅಬ್ಬರ , ಸುಡುಮದ್ದಿನ ಸದ್ದು, ವಿವಿಧ ಬಗೆಯ ಸ್ತಬ್ದಚಿತ್ರಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ಕೆಲ ವರ್ಷದ ಬೆಳವಣಿಯಲ್ಲಿ ಪಾಶ್ಚತ್ಯ ಹಾಡುಗಳಿಗೆ ಡಿಜೆ ಕುಣಿತವೂ ಸಾಮಾನ್ಯವಾಗುತ್ತಿದೆ. ಇಂತಹ ಆಡಂಬರಗಳಿಲ್ಲದೆ ಮೆರವಣಿಗೆ ಸಾಧ್ಯವಿಲ್ಲ ಎನ್ನುವ ಈ ಕಾಲಘಟ್ಟಲದಲ್ಲಿ ಯಾವುದೇ ಸ್ತಬ್ದಚಿತ್ರ, ಡಿಜೆ ಹಾಡುಗಳಿಗೆ ಅವಕಾಶ ನೀಡದೆ, ಯುವ ಸಮುದಾಯಕ್ಕೆ ಪ್ರೇರಣೆ ನೀಡುವ ರೀತಿಯಲ್ಲಿ ಶ್ರೀ ರಾಮ ವಿದ್ಯಾಕೇಂದ್ರದ 304 ಮಂದಿ ವಿದ್ಯಾರ್ಥಿಗಳು ಒಟ್ಟು 19 ತಂಡಗಳನ್ನು ರಚಿಸಿ ಇಡೀ ಮೆರವಣಿಗಯಲ್ಲಿ ಕುಣಿತ ಭಜನೆಯ ಮೂಲಕ ಗಮನ ಸೆಳೆದಿದ್ದಾರೆ.
ಸನಾತನ ಸಂಸ್ಕೃತಿ, ಸಂಸ್ಕಾರಕ್ಕೆ ಪೂರಕವಾಗುವ ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ಭಜನೆಗೆ ಲಯಬದ್ಧ ಹೆಜ್ಜೆಗಳನ್ನು ಹಾಕುತ್ತಾ, ಜನಮಾನಸದಲ್ಲಿ ಭಕ್ತಿ ಭಾವವನ್ನು ಪುಳಕಗೊಳಿಸಿದ ವಿದ್ಯಾರ್ಥಿಗಳ ಶ್ರದ್ದೆಗೆ ಪ್ರೇಕ್ಷಕ ವರ್ಗ ತಲೆದೂಗಿದೆ. ಮೆರವಣಿಗೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್, ಭಜನಾ ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಕಾರ್ಯದರ್ಶಿ ಕ. ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.
v