ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಫರಂಗಿಪೇಟೆ ಇದರ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ 37ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ಎರಡನೇ ದಿನವಾದ ಮಂಗಳವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 108 ತೆಂಗಿನ ಕಾಯಿಯ ಗಣಹೋಮ ನಡೆಯಿತು.
ಸಭಾಂಗಣದ ಮೇಲ್ಭಾಗದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಗಣಪತಿ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ ಶ್ರೀ ವಿನಾಯಕನಿಗೆ ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಉದ್ಯಮಿ ಸೇಸಪ್ಪ ಕೋಟ್ಯಾನ್, ಸೇವಾಂಜಲಿ ಷ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ವಿಠಪ ಬಂಡಾರಿ, ಪ್ರಮುಖರಾದ ತಾರಾನಾಥ ಕೊಟ್ಟಾರಿ ತೇವು, ಗಣೇಶೋತ್ಸವ ಸಮಿತಿ ಅಧ್ಯಕ್ಷ ಮನೋಹರ ನಾಕ್ ಅರ್ಕುಳ ಮೊದಲಾದವರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
……………………
ಮೀನು ವ್ಯಾಪಾರಿಗಳ ಸೌಹಾರ್ದತೆ:
ಗಣೇಶೋತ್ಸವದ ಆರಂಭದ ದಿನವಾದ ಸೋಮವಾರ ಫರಂಗಿಪೇಟೆಯ ಮೀನು ವ್ಯಾಪಾರಿಗಳು ಒಂದು ದಿನ ಮಾರುಕಟ್ಟೆಯನ್ನು ಬಂದ್ ಗೊಳಿಸಿ ಸೌಹಾರ್ದತೆ ಮೆರೆದರು. ಸೇವಾಂಜಲಿ ಸಭಾಂಗಣದ ಮುಂಭಾಗದಲ್ಲಿಯೇ ಫರಂಗಿಪೇಟೆ ಮೀನು ಮಾರುಕಟ್ಟೆಯಿದ್ದು ಗಣೇಶೋತ್ಸವದ ಪ್ರಯುಕ್ತ ಬೆಳಗಗಿನ ವೇಳೆ ಅರ್ಧದಿನ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವಂತೆ ಸೇವಾಂಜಲಿಯ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ವಾರದ ಹಿಂದೆ ಮೀನು ವ್ಯಾಪಾರಿಗಳಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಎಲ್ಲಾ ಮೀನು ವ್ಯಾಪಾರಿಗಳು ಒಂದು ದಿನವಿಡಿ ಮೀನು ವ್ಯಾಪಾರ ಬಂದ್ಗೊಳಿಸಿ ಸಹಕಾರ ನೀಡಿ ಸೌಹಾರ್ಧತೆ ಮೆರೆದರು.