ಬಂಟ್ವಾಳ: ಎಲೆ ಮರೆಕಾಯಿಯಂತಿರುವ ಪ್ರತಿಭಾನ್ವಿತರನ್ನು ಗುರುತಿಸುವ ಕಾರ್ಯ ಕುಲಾಲ ಯುವ ವೇದಿಕೆಯಿಂದ ಆಗಬೇಕು ಎಂದು ರಾಜ್ಯ ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಹೇಳಿದರು.
ಕರಾವಳಿ ಕುಂಬಾರರ ಯುವ ವೇದಿಕೆ ಮತ್ತು ಕರಾವಳಿ ಕುಂಬಾರರ ಮಹಿಳಾ ಸಂಘ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಭಾನುವಾರ ಪೊಸಳ್ಳಿಯ ಗದ್ದೆಯಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಕೆಸರ್ದ ಕಂಡೊಡು ಕುಸೇಲ್ದ ಗೊಬ್ಬು ಎಸಲ್ – 3 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮೆಲ್ಕಾರ್ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪರ ಹೆಸರು ನಾಮಕರಣ ಮಾಡುವ ಬಗೆಗಿನ ಪ್ರಯತ್ನಕ್ಕೆ ಇನ್ನಷ್ಟು ವೇಗ ನೀಡಬೇಕು, ಸಮುದಾಯದ ನಾಯಕರನ್ನು ಸೇರಿಸಿಕೊಂಡು ಮಂಗಳೂರು ಸಂಸದ ಈಗ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಅವರ ಮೂಲಕ ಈ ಪ್ರಯತ್ನವನ್ನು ಯಶಸ್ಸುಗೊಳಿಸಬೇಕಾಗಿದೆ ಎಂದರು. ಪರಿಸರ ಕ್ಕೆ ಅತೀ ಹತ್ತಿರವಾಗಿ ಬದುಕಿದವರು ಕುಂಬಾರರು, ಮುಂದಿನ ಯುಗ ಕುಂಬಾರರ ಯುಗವಾಗಿದ್ದು ಕುಂಬಾರರ ಮಣ್ಣಿನ ಯುಗವನ್ನು ಬೇರೆಯವರು ಹೈಜಾಕ್ ಮಾಡದಂತೆ ಎಚ್ಚರ ವಹಿಸಬೇಕು. ರೈಲು ನಿಲ್ದಾಣಗಳಲ್ಲಿ ಚಹಾ ಕುಡಿಯಲು ಮಣ್ಣಿನ ಲೋಟ ಬಳಸುವ ಪ್ರಯತ್ನ ಯಶಸ್ಸು ಕಾಣುತ್ತಿದೆ. ಕುಂಬಾರಿಕೆ ವೃತ್ತಿಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಕುಲಾಲ ಸಂಘಟನೆಗಳು ಮಾಡಬೇಕು ಎಂದರು.
ಕೃಷಿಕ ಕೊರಗಪ್ಪ ಮೂಲ್ಯ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಕುಲಾಲ, ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ ಹೊನ್ನಯ್ಯ ಕಾಟಿಪಳ್ಳ, ವಸಂತ ಕುಮಾರ್, ದಿವಾಕರ ಮಯ್ಯರಬೈಲು, ಪೂವಮ್ಮ ದೈಪಲ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ಸುಧಾಕರ್ ಕುಲಾಲ್, ಜಿಲ್ಲಾ ಕುಲಾಲ ಸಂಘದ ಮಹಿಳಾ ಸಮಿತಿ ಅಧ್ಯಕ್ಷೆ ಚಂಚಲಾಕ್ಷಿ ಸುಕುಮಾರ್, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷೆ ಜಯಂತಿ ಗಂಗಾಧರ, ಉದ್ಯಮಿ ಕೃಷ್ಣಪ್ಪ ಬಿ, ಕುಂಬಾರರ ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ಶೇಷಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ಸಂಚಾಲಕ ಸತೀಶ್ ಜಕ್ರಿಬೆಟ್ಟು, ಕೋಶಾಧಿಕಾರಿ ಮಾಧವ ಕುಲಾಲ್ ಬಿ.ಸಿ. ರೋಡು, ಮಹಿಳಾ ಸಮಿತಿಯ ಸುಲೋಚನಾ, ಕ್ರೀಡಾ ಕಾರ್ಯದರ್ಶಿ ಕಾರ್ತಿಕ್ ವೇದಿಕೆಯಲ್ಲಿದ್ದರು. ಗೌರವಾಧ್ಯಕ್ಷ ನಾರಾಯಣ ಸಿ ಪೆರ್ನೆ ಸ್ವಾಗತಿಸಿದರು, ಸಲಹೆಗಾರ ಟಿ. ಶೇಷಪ್ಪ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
ಮೂಲ್ಯಣ್ಣನ ಇಲ್ಲ್ ಜಿಂಜಾಯೆರ್
ಸಭಾವೇದಿಕೆಯನ್ನು ಕುಂಬಾರನ ಮನೆಯ ಮಾದರಿಯಲ್ಲಿ ಅಲಂಕರಿಸಲಾಗಿತ್ತು. ವೇದಿಕೆಯ ಮಹಿಳಾ ಸದಸ್ಯರು ತುಳಸಿಕಟ್ಟೆಗೆ ದೀಪ ಬೆಳಗಿದರೆ, ಸದಸ್ಯರು ಹೊಸ ತೆನೆಯನ್ನು ಹೊತ್ತು ತಂದು ತುಳಸಿಕಟ್ಟೆ ಬಳಿ ಪೂಜೆ ಸಲ್ಲಿಸಿ ಮನೆ ತುಂಬಿಸುವ ದೃಶ್ಯ ಗಮನ ಸೆಳೆಯಿತು. ಗೌರಿ ಹಬ್ಬದ ಪ್ರಯುಕ್ತ ಮಹಿಳಾ ಅತಿಥಿಗಳಿಗೆ ಗಲ್ಲಕ್ಕೆ ಹರಶಿನ ಹಚ್ಚಿ, ಕಪ್ಪು ಗಾಜಿನ ಬಳೆಗಳನ್ನು ತೊಡಿಸಿ ಸ್ವಾಗತಿಸಲಾಯಿತು. ಬಳಿಕ ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.