ಬಂಟ್ವಾಳ: ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಅಮ್ಟೂರು ಘಟಕ, ಶ್ರೀ ಕೃಷ್ಣ ಭಜನಾ ಮಂದಿರ ಅಮ್ಟೂರು ಹಾಗೂ ಗ್ರಾಮ ವಿಕಾಸ ಸಮಿತಿ ಅಮ್ಟೂರು ಇದರ ಸಂಯುಕ್ತ ಆಶ್ರಯದಲ್ಲಿ ಕೆಸರ್ ಪರ್ಬ ಕಂಡಡ್ ಒಂಜಿ ದಿನ ಕಾರ್ಯಕ್ರಮ ಅಮ್ಟೂರಿನ ಬೈದರಡ್ಕ ಪ್ರಭಾಕರ ಶೆಟ್ಟಿಯವರ ಕಂಬಳ ಗದ್ದೆಯಲ್ಲಿ ನಡೆಯಿತು.
ಮೋಹನರಾಜ ಚೌಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಭತ್ತದ ಸಾಗುವಳಿ ಕಡಿಮೆಯಾಗಿ ಗದ್ದೆಗಳೆಲ್ಲಾ ತೋಟಗಳಾಗಿವೆ. ಹಿಂದೆ ಕಂಬಳ ಗದ್ದೆಗೆ ಊರಿನ ಎಲ್ಲಾ ಕೋಣಗಳನ್ನು ಕರೆಸಿ ಉಳುಮೆ ಮಾಡಲಾಗುತ್ತಿತ್ತು. ಊರ ಜನರೆಲ್ಲಾ ಸೇರಿ ಕಂಡಕೋರಿಯ ಮನೋರಂಜನೆಯೊಂದಿಗೆ ನೇಜಿ ನಾಟಿ ಮಾಡುವ ಕೃಷಿ ಕೆಲಸಗಳು ನಡೆಯುತ್ತಿತ್ತು. ಈ ಕೃಷಿ ಸಂಸ್ಕೃತಿ ಉಳಿಯಬೇಕು ಎನ್ನುವ ಉದ್ದೇಶದಿಂದ ಬಜರಂಗದಳ ಹಾಗೂ ವಿಶ್ವಹಿಂದೂಪರಿಷತ್ತಿನ ಯುವಕರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದರು.
ಜ್ಯೋತಿಷಿ ಮನೋಜ್ ಕಟ್ಟೆಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆಲ್ಲಾ ಗದ್ದೆಯಲ್ಲಿ ಬೇಸಾಯ ಮಾಡುತ್ತಿದ್ದಾಗ ಕೇಳುತ್ತಿದ್ದ ಸ್ವರಗಳು ಈಗ ಕೇಳುತ್ತಿಲ್ಲ, ಯುವಕರು ಕೃಷಿಯತ್ತ ಒಲವು ತೋರಿ ಮತ್ತೆ ಬರಡು ಗದ್ದೆಗಳು ಹಸಿರಾಗಿ ಕಂಗೊಳಿಸಬೇಕು ಎಂದರು.
ಬಿಜೆಪಿ ಎಸ್ಸಿಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಪ್ರಾಸ್ತವಿಕವಾಗಿ ಮಾತನಾಡಿ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳು ನಡೆದ ಬಳಿಕ ಗದ್ದೆಯಲ್ಲಿ ಕೃಷಿ ಕಾರ್ಯ ನಡೆಸುವ ಬಗ್ಗೆಯೂ ಯುವಕರು ಚಿಂತನೆ ಹರಿಸಬೇಕು. ಕೃಷಿ ಕಾರ್ಯದ ಮೂಲಕ ಭೂಮಿ ಹಸಿರಾದಾಗ ಈ ನೆಲವೂ ಫಲವತ್ತಾಗಿ ಗದ್ದೆಗಳು ಸಮೃದ್ದವಾಗಲಿದೆ, ಈ ಬಗ್ಗೆ ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದರು.
ಅಮ್ಟೂರು ಶ್ರೀ ಕೃಷ್ಣ ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿ ಕರಿಂಗಾಣ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾಬಲ ಸಾಲ್ಯಾನ್, ಕಂಬಳ ಗದ್ದೆಯ ಮಾಲಿಕ ಪ್ರಭಾಕರ ಶೆಟ್ಟಿ, ಅಮ್ಟೂರು ಘಟಕದ ಬಜರಂಗದಳ ಸಂಚಾಲಕ ಕೌಶಿಲ್ ಶೆಟ್ಟಿ ಬಾಳಿಕೆ, ವಿಶ್ವ ಹಿಂದೂ ಪರಿಷತ್ ಅಮ್ಟೂರು ಘಟಕದ ಕಾರ್ಯದರ್ಶಿ ಜಗದೀಶ್ ಬಜಾಲ್, ಜೊತೆಕಾರ್ಯದರ್ಶಿ ಜಿತೇಶ್ ಶೆಟ್ಟಿ ಬಾಳಿಕೆ, ಅಮ್ಟೂರು ಕೃಷ್ಣ ಮಂದಿರದ ಕಾರ್ಯದರ್ಶಿ ಶ್ರೀಧರ ಸುವರ್ಣ, ಕೃಷಿಕರಾದ ಮನಮೋಹನ್ ಕಟ್ಟೆಮಾರ್, ಗಣೇಶ್ ಬೈದೆರಡ್ಕ, ಬಾಳಿಕ ಕಾಂತಪ್ಪ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ, ಗ್ರಾಮ ವಿಕಾಸ ಸಮಿತಿಯ ಕುಶಾಲಪ್ಪ ಅಮ್ಟೂರು ವಂದಿಸಿದರು. ಗೋಪಾಲ ಬಲ್ಯಾಯ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು. ಕೆಸರಿನ ಓಟ, ತಪ್ಪಾಂಗಾಯಿ, ಅಡಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ, ಕುದುರೆಗಾಡಿ ಓಟ, ಪರಮಿಡ್ ರಚನೆ, ಕುರಂಟ್ ಕಲ್ಲು, ಹಗ್ಗಜಗ್ಗಾಟ, ಕೊಡಪಾನದಲ್ಲಿ ನೀರು ತರುವುದು ಮೊದಲಾದ ಆಟೋಟ ಸ್ಫರ್ಧೆಗಳು ನಡೆದವು. ಸ್ಥಳೀಯರು ಮನೆಗಳಲ್ಲಿ ತಯಾರಿಸಿ ತಂದ ಕಡುಬು, ಪತ್ರೋಡೆ ತಿಂಡಿಗಳು ಬೆಳಗ್ಗಿನ ಉಪಹಾರಕ್ಕೆ ಉದರ ತಣಿಸಿತು. ಮಕ್ಕಳು, ಯುವಕರು, ಮಹಿಳೆಯರು, ಹಿರಿಯರೆಲ್ಲಾ ಕೆಸರಾಟದಲ್ಲಿ ಸಂಭ್ರಮಿಸಿದರು.