ಬಂಟ್ವಾಳ: ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಶೈಕ್ಷಣಿಕ ಸಮಾವೇಶ, ಸನ್ಮಾನ, ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಜೇಸಿ ತರಬೇತುದಾರ ಕೃಷ್ಣಮೋಹನ್ ಪಿ.ಎಸ್ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯೋಪಾಧ್ಯಾಯ ಒರ್ವ ಸರ್ವಾಂಗೀಣ ನಾಯಕ. ಶ್ರದ್ಧೆ, ನಂಬಿಕೆ, ನಿರ್ದಿಷ್ಡ ಗುರಿ ಇಟ್ಟು ಕೊಂಡು ಮನಪೂರ್ತಿಯಾಗಿ ಕೆಲಸ ಮಾಡಿದಾಗ ನಾವು ಯಶಸ್ಸು ಗಳಿಸಲು ಸಾಧ್ಯವಿದೆ. ಮುಖ್ಯೋಪಾಧ್ಯಾಯರ ಒಂದು ಮಾತು ವಿದ್ಯಾರ್ಥಿಯ ಮೇಲೆ ಪ್ರಭಾವ ಬೀರಿ ಆತನ ಭವಿಷ್ಯವನ್ನೇ ಬದಲಿಸಲು ಸಾಧ್ಯವಿದೆ ಎಂದು ತಿಳಿಸಿದರು. ಶಿಕ್ಷಕರಿಗೆ ದೂರದೃಷ್ಟಿ ಇರಬೇಕು, ಮೌಲ್ಯಯುತ ಶಿಕ್ಷಣ ಕೊಡುವ ಚಿಂತನೆ ಬೇಕು, ಶಾಲೆಯಲ್ಲಿ ಸಂಸ್ಕೃತಿಯನ್ನು ಬೆಳೆಸುವ ನಿರ್ಮಾತೃಗಳಾಗಬೇಕು, ಸಂಪನ್ಮೂಲಗಳ ನಿರ್ವಹಣೆಯನ್ನು ಕಲಿಯಬೇಕು ಎಂದ ಅವರು ವಿದ್ಯಾರ್ಥಿ ಜೀವನವನ್ನು ಬದಲಿಸಿ ದೇಶದ ಉತ್ತಮ ನಾಗರೀಕನನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಸಭಾಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಪ್ರೌಢಶಾಲಾ ಶಿಕ್ಷಕರ ಸಂಘದ ಮೂಲಕ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗುತ್ತಿದೆ ಎಲ್ಲರ ಸಹಕಾರ ಪ್ರೋತ್ಸಾಹ ಅಗತ್ಯ ಎಂದರು. ಮುಖ್ಯ ಅತಿಥಿಯಾಗಿ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದರು. ಉಪಾಧ್ಯಕ್ಷರಾದ ಕೊರಗಪ್ಪ ಭಂಡಾರಿ, ಭ.ನವಿನಾ ವೇದಿಕೆಯಲ್ಲಿದ್ದರು.
ನಿವೃತ್ತ ಮುಖ್ಯ ಶಿಕ್ಷಕರಾದ ರಾಮಚಂದ್ರ ಭಟ್ ಕೆ., ಐತಪ್ಪ ಶೇಣವ, ಶಿವರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು, ಕ್ರೀಡಾ ಸಾಧಕರನ್ನು ಅಭಿನಂದಿಸಲಾಯಿತು.
ಸಂಘದ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ ಸ್ವಾಗತಿಸಿದರು, ಕೋಶಾಧಿಕಾರಿ ರಮಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು, ಕಿರಣ್ ವಂದಿಸಿದರು.