ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ಲಯನ್ಸ್ ಕ್ಲಬ್ ಕಲ್ಯಾಣಪುರ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ನೆರೆ ಸಂತ್ರಸ್ತರಿಗೆ ಅಕ್ಕಿ, ಬಟ್ಟೆ ಮೊದಲಾದ ದಿನ ಬಳಕೆ ವಸ್ತುಗಳ ಪರಿಹಾರ ಕಿಟ್ ವಿತರಣಾ ಕಾರ್ಯಕ್ರಮ ಮಂಗಳವಾರ ಸಂಜೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಈ ಸಂಧರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ರೋನಾಲ್ಡ್ ಐಸಕ್ ಗೋಮ್ಸ್ ಮಾತನಾಡಿ ಲಯನ್ಸ್ ಸಂಸ್ಥೆಗೆ ನೀಡಿದ ದೇಣಿಗೆ ಮತ್ತೆ ಸಹಾಯ ರೂಪದಲ್ಲಿ ಬರುತ್ತದೆ, ಮತ್ತೆ ಸಮಾಜಕ್ಕೆ ಅರ್ಪಿತವಾಗುತ್ತದೆ. ನೆರೆ ಸಂತ್ರಸ್ತರಿಗೆ ನೀಡಲು ಲಯನ್ಸ್ ಸಂಸ್ಥೆ 10 ಸಾವಿರ ಡಾಲರ್ ಮೊತ್ತವನ್ನು ನೀಡಿದ್ದು ಅದನ್ನು ವಸ್ತು ರೂಪದಲ್ಲಿ ಸಂತ್ರಸ್ತ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದರು. ನಮ್ಮಿಂದ ಆಗುವ ಸಣ್ಣ ಸಹಾಯವನ್ನು ಸಂತ್ರಸ್ತರಿಗೆ ನೀಡುತ್ತಿದ್ದೇವೆ ಪ್ರೀತಿಯಿಂದ ಸ್ವೀಕರಿಸಿ ಎಂದು ವಿನಂತಿಸಿಕೊಂಡರು.
ಕಲ್ಯಾಣಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಪುಂಡಲೀಕ ಅನಂತ ಭಟ್ ಮಾತನಾಡಿ ಕಷ್ಟ ಎಂಬುವುದು ಪ್ರತಿಯೊಬ್ಬರಿಗೂ ಇದೆ. ಅದನ್ನು ನಿವಾರಿಸಿಕೊಂಡು ಮುಂದೆ ನಾವು ಹೋಗುವ ದಾರಿಯನ್ನು ಸುಗಮ ಮಾಡಿಕೊಳ್ಳಬೇಕು ಎಂದರು.
ಲಯನ್ಸ್ ಜಿಲ್ಲಾ ಒಂದನೇ ಉಪರಾಜ್ಯಪಾಲ ಗೀತ್ ಪ್ರಕಾಶ್, ಜಿಲ್ಲಾ ಕೋಶಾಧಿಕಾರಿ ಹರೀಶ್ ಶೆಟ್ಟಿ, ವಲಯಾಧ್ಯಕ್ಷ ಸುಧಾಕರ ಆಚಾರ್ಯ, ಪ್ರಾಂತ್ಯ ಅಧ್ಯಕ್ಷ ರಾಧಕೃಷ್ಣ ರೈ ಬಂಟ್ವಾಳ ಘಟಕದ ಕೋಶಾಧಿಕಾರಿ ದೇವಿಕಾ ದಾಮೋದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಎರಡನೇ ಉಪರಾಜ್ಯಪಾಲ ವಸಂತ ಶೆಟ್ಟಿ ಪ್ರಸ್ತಾವಿಸಿದರು, ಕಾರ್ಯದರ್ಶಿ ರಾಧಕೃಷ್ಣ ಬಂಟ್ವಾಳ್ ವಂದಿಸಿದರು. ಬಂಟ್ವಾಳ ತಾಲೂಕಿನ ಒಟ್ಟು 78 ಮಂದಿ ಫಲಾನುಭವಿಗಳಿಗೆ ಪರಿಹಾರ ಕಿಟ್ ವಿತರಿಸಲಾಯಿತು. ಅಕ್ಕಿ, ದೋತಿ, ಚಾಪೆ, ಹೊದಿಕೆ ಮತ್ತಿತರ ವಸ್ತುಗಳು ಕಿಟ್ನಲ್ಲಿ ಒಳಗೊಂಡಿತ್ತು.