ಬಂಟ್ವಾಳ: ಭೀಕರ ಪ್ರವಾಹಕ್ಕೆ ಬಂಟ್ವಾಳ ಅಕ್ಷರಶಃ ತತ್ತರಿಸಿ ಹೋಗಿದೆ. ಶುಕ್ರವಾರ ರಾತ್ರಿಯಿಂದ ಗಾಳಿ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದಂತೆಯೇ ನೇತ್ರಾವತಿ ನದಿಯಲ್ಲಿ ಪ್ರವಾಹವೂ ಉಕ್ಕಿ ಹರಿದು ಜಲಪ್ರಳಯದ ಭೀತಿ ಮೂಡಿಸಿದೆ. ಬಂಟ್ವಾಳ ಪೇಟೆಗೂ ಶುಕ್ರವಾರ ಮಧ್ಯರಾತ್ರಿ ನೀರು ನುಗ್ಗಿದ್ದು ಅಂಗಡಿ, ಮಳಿಗೆಗಳು ಜಲಾವೃತಗೊಂಡಿದೆ. ವ್ಯಾಪರಿಗಳು ರಾತ್ರಿಯಿಡಿ ನಿದ್ದೆ ಬಿಟ್ಟು ಕಾಯುವ ಸ್ಥಿತಿ ನಿರ್ಮಾಣಗೊಂಡಿದ್ದು ನೆರೆ ಏರಿಕೆಯಾಗುತ್ತಲೆ ಇತ್ತು. ಹಲವಾರು ದೇವಸ್ಥಾನ, ಮಂದಿರ, ಮಸೀದಿ, ದರ್ಗಾ, ಶಾಲೆ, ಅಂಗನವಾಡಿಗಳು ಮುಳುಗಡೆಯಾಗಿವೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಪರ್ಕವೇ ಕಡಿತಗೊಂಡಿದೆ. ಶುಕ್ರವಾರ ಸಂಜೆಯಿಂದ ವಿದ್ಯುತ್ ಕೈಕೊಟ್ಟು ಕೆಲ ಪ್ರದೇಶಗಳ ಜನರು ದೂರವಾಣಿ ಸಂಪರ್ಕವೂ ಕಡಿತಗೊಂಡಿದೆ. ಜಕ್ರಿಬೆಟ್ಟು ಬಳಿ ರಸ್ತೆಗೆ ನೀರು ಬಿದ್ದು ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳ ಸಂಪರ್ಕ ಕಡಿತಗೊಂಡಿದೆ. ಪಾಣೆಮಂಗಳೂರಿನ ಹಳೆ ಸೇತುವೆಯ ಆಧಾರ ಸ್ತಂಭಗಳು ಬಹುತೇಕ ಮುಳುಗಡೆಯಾಗಿದೆ. ನೆರೆ ಪೀಡಿತ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗಿದ್ದು ಬಂಟ್ವಾಳ ನಿರೀಕ್ಷಣ ಮಂದಿರ ಹಾಗೂ ಪಾಣಮಂಗಳೂರಿನ ಶಾರಾದ ಪ್ರೌಢಶಾಲೆಯ ಗಂಜಿ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ರಮನಾಥ ರೈ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತಹಶೀಲ್ದಾರ್ ರಶ್ಮಿ ಎಸ್ಆರ್ ಹಾಗೂ ಅಧಿಕಾರಿಗಳು ತಂಡ ಮಳೆಯ್ನನು ಲೆಕ್ಕಿಸದೆ ರಕ್ಷಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಸಂಜೆಯ ವೆಳೆಗೆ ನೆರೆ ಸ್ವಲ ಇಳಿಕೆಯಾಗಿ ಜನ ನಿಟ್ಟುಸಿರು ಬಿಡುವಂತಾಗಿದೆ.