ಬಂಟ್ವಾಳ: ಹರಿಯಾಣದ ಸ್ಲಂ ಹಾಗೂ ಸರಕಾರಿ ಶಾಲೆಗೆ ಭೇಟಿ ನೀಡಿದ ಭಾರತ ಶಿಕ್ಷಣ ರಥಯಾತ್ರೆ ತಂಡ ಸೋಮವಾರ ಸಂಜೆ ಹರಿಯಾಣ ಸರಕಾರದ ಆರೋಗ್ಯ ಸಚಿವ ಡಾ. ಭನ್ವಾರಿಲಾಲ್ ಅವರನ್ನು ದಾರುವೇಡಾದ ಅಂಬೇಡ್ಕರ್ ವೃತ್ತದ ಬಳಿ ಭೇಟಿ ಮಾಡಿತು. ಒಂದೇ ದೇಶ ಒಂದೇ ತೆರಿಗೆ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ, ಇಂತಹ ಸಂದರ್ಭದಲ್ಲಿ ಒಂದೇ ದೇಶ ಒಂದೇ ಶಿಕ್ಷಣ ಎನ್ನುವ ನಿಮ್ಮ ಪರಿಕಲ್ಪನೆ ಚೆನ್ನಾಗಿದೆ. ದೇಶದ ಪ್ರತಿಯೊಬ್ಬ ಬಡ ವಿದ್ಯಾರ್ಥಿಗೂ ಸಮಾನ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕದಿಂದ ದೆಹಲಿಗೆ ಹೊರಟಿರುವ ಶಿಕ್ಷಣ ರಥಯಾತ್ರೆಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದ ಅವರು ಒಂದೇ ದೇಶ ಒಂದೇ ಶಿಕ್ಷಣದ ಪತಾಕೆಯನ್ನು ಹಸ್ತಾಂತರಿಸುವ ಮೂಲಕ ದೆಹಲಿಗೆ ಬೀಳ್ಕೊಟ್ಟರು. ಈ ಸಂದರ್ಭ ಸ್ಥಳೀಯ ಶಾಸಕ ರಣದೀರ್ ಸಿಂಗ್ ಕಪ್ಡವಾಲಾ, ಶಿಕ್ಷಣಾಭಿಮಾನಿ ಶಂಕರ್ ಅಗರ್ ವಾಲಾ, ಶೀಷಾರಾಮ್, ಮೊದಲಾದವರು ಹಾಜರಿದ್ದರು.