ಬಂಟ್ವಾಳ: ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕೇವಲ 30 ಮಕ್ಕಳಿಗೆ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ನೀಡಬೇಕೆನ್ನುವ ಆದೇಶವನ್ನು ಸರಕಾರ ಹಿಂಪಡೆದುಕೊಂಡಿದ್ದು, ದಾಖಲಾತಿ ಪಡೆದುಕೊಂಡ ಎಲ್ಲಾ ವಿದಾರ್ಥಿಗಳಿಗೂ ಇಂಗ್ಲೀಷ್ ಭೋದನೆಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿ ಕುಮಾರ ಸ್ವಾಮೀಯವರು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಗೆ ಆಶ್ವಾಸನೆ ನೀಡಿದ್ದಾರೆ ಎಂದು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ಅಧ್ಯಕ್ಷ ಪ್ರಕಾಶ್ ಅಂಚನ್ ತಿಳಿಸಿದ್ದಾರೆ. ಈ ಶೈಕ್ಷಣಿಕ ವರ್ಷದಿಂದ ರಾಜ್ಯದ 1ಸಾವಿರ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಂದ ಆಂಗ್ಲ ಮಾಧ್ಯಮ ಕಲಿಕೆಗೆ ಸರಕಾರ ಅನುಮತಿ ನೀಡಿತ್ತು. ಇದರಿಂದಾಗಿ ಆಂಗ್ಲ ಮಾಧ್ಯಮ ಕಲಿಕೆಗೆ ಅನುಮತಿ ಪಡೆದುಕೊಂಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿತ್ತು. ಆದರೆ ಕಳೆದ ಜೂ.1ರಂದು ಕೇವಲ 30 ಮಕ್ಕಳಿಗೆ ಮಾತ್ರ ಆಂಗ್ಲಮಾಧ್ಯಮ ಕಲಿಕೆಗೆ ಅವಕಾಶ ನೀಡಬೇಕೆಂದು ಆದೇಶ ಹೊರಡಿಸಿದ್ದು ವಿದ್ಯಾರ್ಥಿಗಳ ಪೋಷಕರು ಗೊಂದಲಕ್ಕೀಡಾಗಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು ತಪ್ಪಿದ್ದಲ್ಲಿ ರಾಜ್ಯದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಅವರು ರಾಜ್ಯ ಸಮಿತಿಯಿಂದ ಮಾಹಿತಿಯನ್ನು ಪಡೆದುಕೊಂಡು ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರೊಂದಿಗೆ ಚರ್ಚಿಸಿ ಸರಕಾರದ ಆದೇಶವನ್ನು ಹಿಂಪಡೆಯುವಂತೆ ಮನವೊಲಿಸಿದ್ದರು. ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದರು, ಆದರೆ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ಆಂಗ್ಲ ಮಾಧ್ಯಮ ಭೋದನೆಗೆ ಅನುಮತಿ ಪಡೆದುಕೊಂಡಿರುವ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ನೀಡಲು ಶಿಕ್ಷಣ ಇಲಾಖೆಗೆ ಸೂಚನೆ ನೀಡವುದಾಗಿ ಮುಖ್ಯಮಂತ್ರಿ ಹೇಳಿದ್ದು ಪೋಷಕರು ಗೊಂದಲಕ್ಕೀಡಾಗುವುದು ಬೇಡ ಎಂದು ಭೋಜೆಗೌಡರು ಆಶ್ವಾಸನೆ ನೀಡಿರುವುದಾಗಿ ಅಂಚನ್ ತಿಳಿಸಿದ್ದಾರೆ. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಕ್ಕೆ ಎಷ್ಟೇ ವಿರೋಧ ವ್ಯಕ್ತವಾದರೂ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃವದ ಸರಕಾರ ಈ ಬಗ್ಗೆ ದೃಢ ನಿಲುವು ಹೊಂದಿತ್ತು. ಈ ಮಧ್ಯೆ ಗೊಂದಲದ ಆದೇಶದ ವಿರುದ್ದ ರಾಜ್ಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದಾಗ ಸರಕಾರ ತಕ್ಷಣ ಸ್ಪಂದನೆ ನೀಡಿ ಪರಿಷ್ಕೃತ ತೀರ್ಮಾನವನ್ನು ನೀಡಿದ್ದು ಸ್ವಾಗತಾರ್ಹ ಎಂದಿರುವ ಪ್ರಕಾಶ್ ಅಂಚನ್ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಭೋದನೆ ಯಾರೇ ವಿರೊಧ ವ್ಯಕ್ತಪಡಿಸಿದರೂ ಅವರ ಮನೆಮಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.