ಬಂಟ್ವಾಳ: ರಾಜ್ಯದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕೇವಲ 30 ಮಕ್ಕಳಿಗೆ ಮಾತ್ರ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ದಿಢೀರ್ ಆದೇಶದ ವಿರುದ್ದ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್ಅಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟೇ ಮಕ್ಕಳೂ ಬಂದರೂ ಒಂದನೇ ತರಗತಿಗೆ ಪ್ರವೇಶ ನೀಡುವಂತೆ ಆದೇಶ ನೀಡಿದ್ದ ಸರ್ಕಾರ ಇದೀಗ ಖಾಸಗಿ ಲಾಭಿಗೆ ಮಣಿದು 30 ಮಕ್ಕಳಿಗೆ ಮಾತ್ರ ಅವಕಾಶ ನೀಡಬೇಕೆಂದಿರುವ ಧೋರಣೆ ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಭೋದನೆಗೆ ಅವಕಾಶ ನೀಡಿದ ಬಳಿಕ ಅಂತಹ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಏರಿದೆ. ಪ್ರತೀ ಶಾಲೆಗಳಲ್ಲೂ ಒಂದನೇ ತರಗತಿಗೆ ಸರಾಸರಿ 50 ರಿಂದ 100ಕ್ಕೂ ಅಧಿಕ ಮಂದಿ ಸೇರ್ಪಡೆಗೊಂಡಿದ್ದಾರೆ. ಇದೀಗ ಸೇರ್ಪಡೆ ಪ್ರಕ್ರಿಯೆಗಳು ಎಲ್ಲಾ ಮುಗಿದ ಬಳಿಕ ಆಂಗ್ಲ ಮಾಧ್ಯಮ ಭೋದನೆಗೆ ಕೇವಲ 30 ಮಕ್ಕಳಿಗೆ ಮಾತ್ರ ಅವಕಾಶ ಎನ್ನುವ ಆದೇಶವನ್ನು ಜೂನ್ 1 ರಂದು ನೀಡಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಗೊಂದಲಕ್ಕೀಡಾಗುವಂತೆ ಮಾಡಿದೆ. 30 ಮಕ್ಕಳಿಗೆ ಮಾತ್ರ ಆಂಗ್ಲ ಮಾಧ್ಯಮ ಕಲಿಕೆಗೆ ಅವಕಾಶ ನೀಡಿದರೆ ಆಂಗ್ಲ ಮಾದ್ಯಮದಲ್ಲಿ ಕಲಿಯ ಬೇಕೆನ್ನುವ ಉದ್ದೇಶದಿಂದ ಖಾಸಗಿ ಶಾಲೆಗಳಿಗೆ ಹೋಗದೆ ಸರಕಾರಿ ಶಾಲೆಯಲ್ಲಿಯೇ ದಾಖಲಾತಿ ಮಾಡಿಕೊಂಡಿರುವ ಉಳಿದ ವಿದ್ಯಾರ್ಥಿಗಳ ಭವಿಷ್ಯದ ಕತೆಯೇನು? ಸರಕಾರ ಯಾಕೆ ಬಡ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಸರಕಾರ ಈ ತೀರ್ಮಾನ ಅವೈಜ್ಞಾನಿಕವಾಗಿದೆ. ವಿದ್ಯಾರ್ಥಿಗಳ ಪೋಷಕರ ಆಸೆಗೆ ತಣ್ಣೀರು ಎರಚಿದಂತಿದೆ. ಅಲ್ಲದೆ ಸರಕಾರಿ ಶಾಲೆಗಳ ಅಸ್ಥಿತ್ವಕ್ಕೂ ಪಟ್ಟು ನೀಡುವಂತಿದೆ. ಸರಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು, ಒಂದನೇ ತರಗತಿಗೆ ದಾಖಲಾತಿ ಮಾಡಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಅವಕಾಶ ಕೊಡಬೇಕು ತಪ್ಪಿದ್ದಲ್ಲಿ ರಾಜ್ಯದ್ಯಂತ ಪ್ರತಿಭಟನೆ ನಡೆಸುವುದಾಗಿ ಪ್ರಕಾಶ್ ಅಂಚನ್ ಎಚ್ಚರಿಕೆ ನೀಡಿದ್ದಾರೆ.