ಮಂಗಳೂರು: ಕನ್ನಡ ವೈದ್ಯ ಸಾಹಿತ್ಯ ನಿನ್ನೆ ಮೊನ್ನೆಯದಲ್ಲ.
ವೈದ್ಯಕೀಯ ವಿಚಾರಗಳು ಜನಪದರ ಆಡುಭಾಷೆಯಲ್ಲಿ
ಧಾರಾಳವಾಗಿ ಹರಿದು ಬಂದಿವೆ.ಅವರ ಹಾಡುಗಳಲ್ಲಿ ನಾವು
ಕಾಣದ ವಿಷಯವೇ ಇಲ್ಲ ಎನ್ನಬಹುದು.ಭಾರತೀಯ ವೈದ್ಯ
ಶಾಸ್ತ್ರಜ್ಞರಾದ ಧನ್ವಂತರರಿ,ಚರಕ, ಶುಶ್ರುತ ಮೊದಲಾದವರ
ಗ್ರಂಥಗಳು ಬಹು ಹಿಂದೆಯೇ ಕನ್ನಡಕ್ಕೆ ಭಾಷಾಂತರ ಗೊಂಡವು.10ನೇ ಶತಮಾನದ ಸಾಹಿತ್ಯಾಕಾಶದಲ್ಲಿ ಸೂರ್ಯನಂತೆ ಮೆರೆದ ಪಂಪನು ತನ್ನ “ಆದಿ ಪುರಾಣ “ದಲ್ಲಿ
ವೈದ್ಯಸಾಹಿತ್ಯದ ತುಣುಕುಗಳನ್ನು ನಮಗೆ ಕಾಣಿಸುತ್ತಾನೆ.ಗರ್ಭಧಾರಣೆಯ ಅದ್ಭುತ ಘಳಿಗೆಯನ್ನು
“ಗರ್ಭಾವಾಸದೋಳ್ ಶುಕ್ತಿ ಪ್ರಮೋದರ ವರ್ತಿಯಪ್ಪ ನಿರ್ಮಲೋದಕ ಬಿಂದುವಿನಂತೆ ಸಂಕ್ರಮಿಸೆ ಗರ್ಭಮಂ ತಾಳ್ದು” ಎಂದು ಸುಂದರವಾಗಿ ವಿವರಿಸುತ್ತಾನೆ.
ಕ್ರಿ.ಶ.1100ರಲ್ಲಿ ರಚಿತವಾದ ಕೀರ್ತಿಕಾಮನ “ಗೋವೈದ್ಯ”,ಕ್ರಿ. ಶ.1500ರಲ್ಲಿ ಬರೆಯಲಾದ ಶ್ರೀಧರದೇವನ
“ವೈದ್ಯಾಮೃತ”,ಕ್ರಿ. ಶ.1750ರ ಸುಮಾರಿನಲ್ಲಿ ಹೊರಬಂದ
ತಿಮ್ಮರಾಜನ “ಸ್ತ್ರೀ ವೈದ್ಯ “, “ಬಾಲವೈದ್ಯ”,”ವ್ರಣವೈದ್ಯ”
ವೈದ್ಯ ಸಾಹಿತ್ಯದ ಬೆಳವಣಿಗೆಯ ದಿಟ್ಟ ಹೆಜ್ಜೆಗಳು.ಕ್ರಿ. ಶ.
1360ರಷ್ಟು ಹಿಂದೆಯೇ ವೈದ್ಯ ಸಾಹಿತ್ಯದ ಅಗತ್ಯವನ್ನು ಒಂದನೆಯ ಮಂಗರಾಜ ಹೀಗೆ ಹೇಳಿದ್ದಾನೆ-“ಮರ,ಗಾಳಿ,
ಸೂಳೆ,ಬೇಟೆ ಮುಂತಾದವುಗಳನ್ನು ಹೊಗಳಿ ಕಾವ್ಯ ಬರೆಯುವುದಕ್ಕಿಂತ, ಸರ್ವಜನೋಪಕಾರಿಯಾದ ವೈದ್ಯಶಾಸ್ತ್ರವನ್ನು ಹೇಳುವುದರಿಂದ ಜನರಿಗೆ ಹೆಚ್ಚು ಉಪಕಾರವಾಗುತ್ತದೆ.ರೋಗಿಗಳಿಗೆ ಚಿಕಿತ್ಸೆ ಮಾಡಿದಾಗ ಅವರಿಗಷ್ಟೇ ಉಪಕಾರ.ರೋಗಗಳ ಬಗ್ಗೆ, ಚಿಕಿತ್ಸೆಯ ಬಗ್ಗೆ
ಬರೆದರೆ ಬಹಳಷ್ಟು ಜನರಿಗೆ ಉಪಕಾರವಾಗುತ್ತದೆ” ಎಂದಿದ್ದಾನೆ.ವಚನ ಸಾಹಿತ್ಯ, ದಾಸ ಸಾಹಿತ್ಯ ಮತ್ತು ಸರ್ವಜ್ಞನ ತ್ರಿಪದಿಗಳಲ್ಲಿ ಶರೀರ, ಮನಸ್ಸು, ಆಹಾರ ಸೇವನೆ, ಆರೋಗ್ಯಕರ ಜೀವನಶೈಲಿಯ ಬಗ್ಗೆ ಇಂದಿಗೂ ಪ್ರಸ್ತುತವಾದ
ಮಾಹಿತಿಯನ್ನು ಕಾಣುತ್ತೇವೆ .
ಅಲೋಪತಿ ವೈದ್ಯದ ಬಗ್ಗೆ ಮೈಸೂರು ಸಂಸ್ಥಾನದ ಸೇವೆಯಲ್ಲಿದ್ದ ಶ್ರೀ ಎಂ.ಗುರುರಾವ್ ಅವರು 1904ರಲ್ಲಿ “ಆಂಗ್ಲೇಯ ವೈದ್ಯಶಾಸ್ತ್ರವನ್ನು ರಚಿಸಿದರು .1928ರಲ್ಲಿ “ದಾಂಪತ್ಯ ವಿಜ್ಞಾನ “,ಸಂತಾನ ವಿಜ್ಞಾನ “ಮತ್ತು
“ಜನನ ನಿಯಂತ್ರಣ, “ಆಹಾರ ವಿಜ್ಞಾನ “ಎಂಬ ಪುಸ್ತಕಗಳನ್ನು ಬರೆದು ಜನಪ್ರಿಯರಾದ ಡಿ.ಕೆ.ಭಾರದ್ವಾಜರು
ಈ ದಿಶೆಯಲ್ಲಿ ಯುಗಪ್ರವರ್ತಕರಾದರು.1936ರಿಂದ 1942ರ ಅವಧಿಯಲ್ಲಿ ಧಾರವಾಡದಲ್ಲಿದ್ದ ಡಾ.ಎಂ.ಗೋಪಾಲಕೃಷ್ಣರಾಯರು “ಪ್ರೇಮ ಕಲಾ”,ಪೌರುಷ”,
“ಗರ್ಭ ನಿರೋಧ “,ಕಾಮದ ಗುಟ್ಟು “…ಎಂಬ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು.ಆಧುನಿಕ ಕನ್ನಡ ವೈದ್ಯ ಸಾಹಿತ್ಯದ ಭೀಷ್ಮರಾದ ಡಾ.ದೊಡ್ಡೇರಿ ವೆಂಕಟಗಿರಿರಾವ್ ಅವರು 1943ರಲ್ಲಿ ಬರೆದ “ವಿಕೃತ ಕಾಮ”ಅಂದಿನ ಸಾಮಾಜಿಕ ಪರಿಸರದಲ್ಲಿ ಲೈಂಗಿಕ ವೈದ್ಯ ವಿಜ್ಞಾನವನ್ನು ಜನಸಾಮಾನ್ಯರಿಗೆ ಮುಟ್ಟಿಸಿತು.
ಇದೇ ಅವಧಿಯಲ್ಲಿ ಡಾ.ಪಾಂಡುರಂಗ ಕುಲಕರ್ಣಿ ಅವರು “ಸಚಿತ್ರ ಇಂಜೆಕ್ಷನ್ ವಿಜ್ಞಾನ “,”ಅಲೋಪತಿಕ್ ಔಷಧ ಗುಣ ರಹಸ್ಯ”,”ರೋಗೋಪಚಾರ”ಪುಸ್ತಕಗಳನ್ನು ರಚಿಸಿದರು.ಮದರಾಸು ಬುಕ್ ಮತ್ತು ಲಿಟರೇಚರ್ ಸೊಸೈಟಿಯಿಂದ ಬಹುಮಾನವನ್ನು ಪಡೆದರು.ವೈದ್ಯಕೀಯ
ಸಾಹಿತ್ಯಕ್ಕೆ ಜನಪ್ರಿಯನ್ನು,ಸಾಹಿತ್ಯ ಲೋಕದ ಮನ್ನಣೆಯನ್ನು ದೊರಕಿಸಿ ತೊಟ್ಟವರೆಂದರೆ ಕೊರವಂಜಿ ಪತ್ರಿಕಯ ಜನಕ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪಕ ಸದಸ್ಯರಾದ ಡಾ.ಎಂ.ಶಿವರಾಮ್ ಹಾಗೂ ತ್ರಿವೇಣಿ ಮತ್ತು ಸೃಜನಶೀಲ ಸಾಹಿತಿ, ಜನಪ್ರಿಯ ವೈದ್ಯೆ ಡಾ.ಅನುಪಮ ನಿರಂಜನ ಅವರು.ಮಾನಸಿಕ ಹಾಗೂ ದೈಹಿಕ ರೋಗಗಳ
ಬಗ್ಗೆ ಸರಳ ಕನ್ನಡದಲ್ಲಿ ಕೃತಿಗಳನ್ನು ಬರೆದು, ಜನಸಾಮಾನ್ಯರಲ್ಲಿ ಪ್ರೀತಿಗಳಿಸಿದ ಖ್ಯಾತ ವೈದ್ಯರು ಶಿವರಾಮ್. “ರಾಶಿ “ಎಂದೇ ಪ್ರಖ್ಯಾತರಾಗಿದ್ದರು.ಹಲವಾರು
ಪ್ರಶಸ್ತಿಗಳ ಜೊತೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ ಸ್ಥಾನ ಗಳಿಸಿ ಗೌರವ ಗಳಿಸಿದರು.
ಒಂದು ಸಂಸ್ಥೆ ಮಾಡಬೇಕಾದಂತಹ ಕೆಲಸವನ್ನು ತಾವೊಬ್ಬರೇ ಮಾಡಿ ಕನ್ನಡ ವೈದ್ಯ ಲೇಖಕರಿಗೆ, ಕನ್ನಡ ಜನತೆಗೆ “ವೈದ್ಯಪದಕೋಶ “ವನ್ನಿತ್ತ ಕನ್ನಡ ವೈದ್ಯ ಸಾಹಿತ್ಯದ
“ಶಬ್ದ ಬ್ರಹ್ಮರು”ಡಾ.ಡಿ.ಎಸ್. ಶಿವಪ್ಪನವರು.ಅವರ ಕೊಡುಗೆ ಅತ್ಯಮೂಲ್ಯ. ನಾಡಿನ ಅನೇಕ ಪತ್ರಿಕೆಗಳಲ್ಲಿ ವೈದ್ಯ ಲೇಖನಗಳನ್ನು ಬರೆದು, ಈ ಪ್ರಕಾರಕ್ಕೆ ಜನಮನ್ನಣೆಯನ್ನು ಗಳಿಸಿಕೊಟ್ಟ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಇವರ ನಂತರ ವೈದ್ಯ ಸಾಹಿತ್ಯದಲ್ಲಿ ಕೇಳಿ ಬರುವ ದೊಡ್ಡ ಹೆಸರು ನಾಡೋಜ ಡಾ.ಪಿ.ಎಸ್. ಶಂಕರ.ಅವರು ಬರೆದ
ಪುಸ್ತಕಗಳು ಮೂರು ರೀತಿಯವು:ಪೂರ್ಣ ಪ್ರಮಾಣದವು,
ಭಾಷಾಂತರಗಳು ಮತ್ತು ಕಿರುಹೊತ್ತಿಗೆಗಳು.ವೈದ್ಯ ವಿಷಯಗಳನ್ನು ಕನ್ನಡದಲ್ಲೇ ಭೋಧಿಸುವುದು ಅಗತ್ಯವೆಂದು ನೆರೆ ನಂಬಿದವರು ಡಾ.ಶಂಕರ.ಇವರನ್ನು “ವೈದ್ಯ ಸಾಹಿತ್ಯ ದಿಗಂತದ ಬೆಳ್ಳಿ ಚುಕ್ಕಿ”ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ಡಾ.ಸ.ಜ.ನಾಗಲೋಟಿಮಠ (ಡಾ.ಸಜನಾ) ಅವರ
ವೈದ್ಯ ಸಾಹಿತ್ಯದ ಕೊಡುಗೆ ಅಪಾರವಾದುದು.ಇವರ ಉತ್ತರ ಕರ್ನಾಟಕದ ಗಂಡು ಶೈಲಿಯ ಕನ್ನಡ ಇವರ ಮಾತಿನಲ್ಲಿ ಹಾಗೂ ಬರಹದಲ್ಲಿ ಹಾಸುಹೊಕ್ಕಾಗಿದೆ. ಈ ಶೈಲಿಯ ಬರಹವೇ ಅವರನ್ನು ಜನಪ್ರಿಯ ಲೇಖಕರನ್ನಾಗಿಸಿತ್ತು.
“ಕಿರಿದರೊಳ್ ಪಿರಿದರ್ಥಂ ತುಂಬಿ “ಎಂಬ ಉಕ್ತಿಯಂತೆ ಒಂದೇ ಒಂದು ಪುಟದಷ್ಟು ಅರ್ಥಪೂರ್ಣ ಆರೋಗ್ಯ ವಿಚಾರಗಳನ್ನು “ಜೀವನಾಡಿ “ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಓದುಗರಿಗೆ ನೀಡುತ್ತಿದ್ದರು.ನಮ್ಮ ಮಣ್ಣಿನ
ಸೊಗಸು, ಸೊಗಡು, ಪ್ರಚಲಿತ ನಮ್ಮ ಸಮಾಜ, ನಾಡಿನ ಆರೋಗ್ಯ ವಿಚಾರಗಳು, ಹೊಸ ಚಿಂತನೆಗಳು ‘ಕೋಲ್ಮಿಂಚಿನಂತೆ ‘ಮೂಡಿಬಂದಿವೆ.1993 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ವೈದ್ಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವಕ್ಕೆ ಪಾತ್ರರಾಗಿದ್ದರು.
ಡಾ.ಸಿ.ಆರ್.ಚಂದ್ರಶೇಖರ ಕನ್ನಡದ ಗುಡಿಗೆ ವೈದ್ಯ ಸಾಹಿತ್ಯದ ತೋರಣ ಕಟ್ಟಿದ ಕಲಿ.ಬಹುಶ: ಭಾರತೀಯ ಭಾಷೆಗಳಲ್ಲಿ ಮನೋವೈದ್ಯಕೀಯ ಬಗ್ಗೆ ಡಾ.ಸಿ.ಆರ್. ಸಿ.ಅವರು ಬರೆದಷ್ಟು ಸಾಹಿತ್ಯವನ್ನು ಮತ್ತಾವ ವೈದ್ಯರೂ ಬರೆದಿಲ್ಲವೆಂದರೆ ಅತಿಶೆಯೋಕ್ತಿಯಾಗಲಾರದು. ಡಾ.ವಸಂತ ಕುಲಕರ್ಣಿ ವೈದ್ಯಕೀಯ ಲೇಖನಗಳನ್ನು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಬರೆದಿರುವರು .ವೈದ್ಯಕೀಯ ವಿಷಯಗಳನ್ನು ಅಧ್ಯಯನ ಗೈದು,ಆಳವಾಗಿ ಯೋಚಿಸಿ, ಹೃದಯದಲ್ಲಿ ಮಂಥಿಸಿ,ಅನುಭವದಲ್ಲಿ ಸ್ಪಂದಿಸಿ ಕವನ ಸಾಲುಗಳಲ್ಲಿ ಸುಂದರವಾಗಿ ಸೆರೆಹಿಡಿಯುವ ರೀತಿ ಡಾ.ವಸಂತ ಕುಲಕರ್ಣಿ ಅವರಿಗೆ ಸಿದ್ದಿಸಿತ್ತು.ಡಾ.ಡಿ.ಕೆ.ಮಹಾಬಲರಾಜು ಶುದ್ದವಾದ, ಸರಳವಾದ ಕನ್ನಡದಲ್ಲಿ ಅವರ ಲೇಖನಗಳು ಝರಿಯಾಗಿ ನಾನಾ ಪತ್ರಿಕೆಗಳ ಮೂಲಕ ಹರಿದಿವೆ. ಹರಿಯುತ್ತಿವೆ.
ಕನ್ನಡ ನಾಡು-ನುಡಿ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಡಾ.ಅಶೋಕ ಪೈ ಒಬ್ಬರು. ಅವರು ಸರಳ ಮತ್ತು ವಸ್ತುನಿಷ್ಠ ಬರಹಗಳ ಮೂಲಕ ಕನ್ನಡ ವೈದ್ಯ ಸಾಹಿತ್ಯವನ್ನು
ಶ್ರೀಮಂತಗೊಳಿಸಿದ್ದಾರೆ.ಇವರ ‘ಉಷಾಕಿರಣ’,’ಚಿತ್ತಚೇತನ’
ಚಲನಚಿತ್ರಗಳಾಗಿ ಪ್ರೇಕ್ಷಕರ ಮನ ಮುಟ್ಟಿವೆ.ತಟ್ಟಿವೆ. ಮನೋವೈದ್ಯಕೀಯ ಸಾಹಿತ್ಯದಲ್ಲಿ ಹೆಸರು ಮಾಡಿರುವ ವೈದ್ಯ ಸಾಹಿತಿಗಳೆಂದರೆ ಡಾ.ಕೆ.ಆರ್. ಶ್ರೀಧರ ,ಡಾ.ಪಾಲಾಕ್ಷ,
ಮೋಹನ ವೆರ್ಣೇಕರ, ಎನ್.ಗೋಪಾಲಕೃಷ್ಣ ಮುಂತಾದವರು.
ಅನುಪಮ ನಿರಂಜನ ಪ್ರಶಸ್ತಿ ಪುರಸ್ಕೃತ ಡಾ.ಎಸ್. ಪಿ.ಯೋಗಣ್ಣ “ಆರೋಗ್ಯ ಯೋಗ ”
ಪತ್ರಿಕೆ ಹುಟ್ಟು ಹಾಕಿ, ಸಂಪಾದಕರಾಗಿ ಅನೇಕ ಲೇಖನಗಳನ್ನು ಜನತೆಗೆ ನೀಡಿದ್ದಾರೆ. ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಅವರಲ್ಲಿ ಸಣ್ಣ ವಿಷಯಗಳು, ದೊಡ್ಡ ವಿಷಯಗಳು ಎಂಬ ದೊಡ್ಡಸ್ತಿಕೆಯ ಧೋರಣೆ ಇಲ್ಲ.
ಬದುಕು ಯಾವುದೆಲ್ಲದರಿಂದ ತುಂಬುತ್ತದೋ ಅವೆಲ್ಲವನ್ನು ಕಾಣಲು ಪ್ರಯತ್ನಿಸಿದ್ದಾರೆ.ಅವರ “ನಾನ್ಯಾರು?”ಕೃತಿ ಅದ್ಭತಾದ ಅಪರೂಪವಾದ ಕೃತಿ. ಇಲ್ಲೊಂದು ಹೊಸ ಪ್ರಯೋಗ ಮಾಡಿದ್ದಾರೆ.ಇವರು 1993ರಲ್ಲಿ ಮೈಸೂರಲ್ಲಿ ಮಾಡಿದ ಅಖಿಲ ಭಾರತ ಕನ್ನಡ ವೈದ್ಯ ಸಾಹಿತ್ಯ ಸಮ್ಮೇಳನ ಒಂದು ದಾಖಲೆ. ವೈದ್ಯ ಸಾಹಿತ್ಯ ಲೋಕದ ಅಪರೂಪದ ಮೈಲುಗಲ್ಲು. ಇವರೇ ಮಂಗಳೂರಲ್ಲಿ ನೆರವೇರುತ್ತಿರುವ ಕನ್ನಡ ವೈದ್ಯ ಬರಹಗಾರರ ಸಮ್ಮೇಳನದ ಸರ್ವಾಧ್ಯಕ್ಷರು.
ಐದು ವರ್ಷ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ
ಡಾ.ಕರವೀರಪ್ರಭು ಕ್ಯಾಲಕೊಂಡ 49 ಮೌಲಿಕ ಕೃತಿಗಳನ್ನು
ಪ್ರಕಟಿಸಿದ್ದಾರೆ. ಇವರ ಲೇಖನ ಕಲೆ ಒಂದು ರೋಚಕವೂ,
ಮಾದರಿಯೂ, ಪ್ರಭಾವಿಯೂ, ಪರಿಣಾಮಕಾರಿಯೂ ಆಗಿದೆ. ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ, ಅಕಾಡೆಮಿ ಪ್ರಶಸ್ತಿ, ಕುವೆಂಪು ವೈದ್ಯ ಸಾಹಿತ್ಯ ಪ್ರಶಸ್ತಿ, ಕವನ ಸಂಕಲನಕ್ಕೆ ಬೇಂದ್ರೆ ಕಾವ್ಯ ಪ್ರಶಸ್ತಿ, ಕೆ.ಎಸ್. ಎನ್ ಕಾವ್ಯ ಪ್ರಶಸ್ತಿಗೆ ಭಾಜನರಾಗಿರುವರು.
ವೈದ್ಯಲೋಕದ ಕೌತುಕಗಳು, ವಿಶ್ವ ವಿಖ್ಯಾತ ವೈದ್ಯ ವಿಜ್ಞಾನಿಗಳು, ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳು… ಇತ್ಯಾದಿ 15ಪುಸ್ತಕಗಳ ಕರ್ತೃ ಡಾ.ಚಂದ್ರಪ್ಪಗೌಡ ಅವರದು ಪಳಗಿದ ಕೈ.ಕನ್ನಡದಲ್ಲಿ ಲೇಖನಗಳನ್ನು ರಾಶಿ ರಾಶಿಯಾಗಿ ಬರೆದು ಪ್ರಸ್ತತ ಪಡೆಸಿರುವ ಡಾ.ನಾ.ಸೋಮೇಶ್ವರ ಕನ್ನಡ ನಾಡು ಕಂಡ ಕೆಲವೇ ವೈದ್ಯ ಸಾಹಿತಿಗಳಲ್ಲಿ ಒಬ್ಬರು.ಇವರು ಸುಮಾರು 30 ಕೃತಿಗಳನ್ನು
ವೈದ್ಯ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ವೈದ್ಯಕೀಯ ವಿಜ್ಞಾನವನ್ನು ಎಲ್ಲರಿಗೂ ತಿಳಿಯುವಂತೆ ಬರೆಯುವುದು ಸುಲಭದ ಕೆಲಸವಲ್ಲ. ಡಾ.ಹೆಚ್.ಎಸ್. ಮೋಹನರವರ ಕೃತಿಗಳ ವೈಶಿಷ್ಟ್ಯವೆಂದರೆ
ಪ್ರಾರಂಭದಿಂದ ಕೊನೆಯ ವರೆಗೆ ಓದಿಸಿಕೊಂಡು ಹೋಗುವ, ಸೆರೆಹಿಡಿಯುವ ಸರಳ ಸುಂದರ ಶೈಲಿ. ಎಂತಹ
ಸಾಮಾನ್ಯರಿಗೂ ಅರ್ಥವಾಗುವಂತಹ ಅನುಭವದ ರಚನೆ
ಇವರದು. ಕನ್ನಡ ವೈದ್ಯ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖರಾದವರೆಂದರೆ ಡಾ.ಆರ್.ಸಿ.ಅಂಗಡಿ, ಡಾ.ಎ.ನಾರಾಯಣಪ್ಪ, ಡಾ.ವಸಂತಕುಮಾರ, ಡಾ.ಬಿ.ಎಮ್. ಹೆಗಡೆ, ಡಾ.ಸಂಜೀವ ಕುಲಕರ್ಣಿ, ಡಾ.ಸಿ.ಅಶ್ವಥ್, ಡಾ.ಬಿ.ಜಿ.ಚಂದ್ರಶೇಖರ ,ಡಾ.ಯಲಗುರೇಶ ಸಂಕನಾಳ, ಡಾ.ಎಂ.ಎಸ್. ರಾಜಣ್ಣ, ಡಾ.ಎಸ್. ಎಸ್. ಪಾಟೀಲ, ಡಾ.ವಿನೋದ ಕುಲಕರ್ಣಿ ,ಡಾ.ಕೃಷ್ಣಪ್ರಸಾದ, ಡಾ. ಶಿವಾನಂದ ಕುಬಸದ, ಡಾ.ಎ.ಟಿ.ಪಾಟೀಲ …..ಮುಂತಾದವರು.
ವೈದ್ಯ ಸಾಹಿತ್ಯವನ್ನುಶ್ರೀಮಂತಗೊಳಿಸಿದ ಮೊದಲ ಇಬ್ಬರು ಲೇಖಕಿಯರೆಂದರೆ ತ್ರಿವೇಣಿ ಹಾಗೂ ಅನುಪಮಾ ನಿರಂಜನ .ತ್ರಿವೇಣಿಯವರು ತಾವು ಪಡೆದ ಅನುಭವದೊಡನೆ, ತಮ್ಮ ಸೃಜನಾತ್ಮಕ ಪ್ರತಿಭೆಯನ್ನು ಹೆಣೆದು ನಮ್ಮೆಲ್ಲರ ಹೃದಯಗಳನ್ನು ಸೂರೆಗೊಂಡವರು.ಮುಚ್ಚಿದ ಬಾಗಿಲು, ಶರಪಂಜರ, ಬೆಕ್ಕಿನ ಕಣ್ಣು ಇಂಥ ಅನೇಕ ಮನೋವೈಜ್ಞನಿಕ ಕಾದಂಬರಿಗಳನ್ನು ರಚಿಸಿ ಅಮರರಾದರು. ಡಾ.ಅನುಪಮಾರವರ ಲೇಖನಿಯಿಂದ ವೈದ್ಯ ಸಾಹಿತ್ಯದ ಮಹಾಪೂರವೇ ಹರಿದು ಬಂತು. ಅವರ ವಧುವಿಗೆ ಕಿವಿಮಾತು ,ದಾಂಪತ್ಯ ದೀಪಿಕೆ , ತಾಯಿ-ಮಗು ಈ ಪುಸ್ತಕಗಳು ಅನೇಕ ಮುದ್ರಣಗಳನ್ನು ಕಂಡು ಕನ್ನಡ ವೈದ್ಯಕೀಯ ಪುಸ್ತಕಗಳ ಮಾರಾಟದಲ್ಲಿ ದಾಖಲೆಗಳನ್ನೇ ಸ್ಥಾಪಿಸಿದವು.ಅವರ ಮನಮೋಹಕ ಶೈಲಿ,
ವಿಷಯ ನಿರೂಪಣೆಯ ಜಾಡು ಅವರನ್ನು ಜನಪ್ರಿಯ ಲೇಖಕಿಯನ್ನಾಗಿಸಿದ ಅಂಶಗಳು.ಅವರು ತಮ್ಮ ವೈದ್ಯಕೀಯ ಕೃತಿಗಳಲ್ಲಿ, ಅಬಾಲವೃದ್ಧರವರೆಗೂ ಆರೋಗ್ಯ ಸಮಸ್ಯೆಗಳನ್ನು ತಮ್ಮ ವೃತ್ತಿ ಅನುಭವದ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ.
ಡಾ.ಎಚ್.ಗಿರಿಜಮ್ಮ ಇವರ ಸಾಹಿತ್ಯಿಕ, ವೈಜ್ಞಾನಿಕ ಹಾಗೂ ವೈದ್ಯಕೀಯ ಪ್ರವೃತ್ತಿಗಳನ್ನು ಮೂರು ಶಾಖೆಗಳಲ್ಲಿ
ಗುರುತಿಸಬಹುದು. ಮುದ್ರಣ, ವಿದ್ಯುನ್ಮಾನ ಹಗೂ ಸಾರ್ವಜನಿಕ ಶಿಕ್ಷಣ. ಇವರ ಪ್ರಕಟಿತ 22 ಪುಸ್ತಕಗಳಲ್ಲಿ ಬಂಜೆತನ, ಹೊಸಹುಟ್ಟು, ಗರ್ಭಿಣಿ, ಬಾಣಂತಿತನ, ನಿಮ್ಮ ಮಗು, ಆರೋಗ್ಯ ಭಾಗ್ಯ…..ಮುಖ್ಯವಾದವು. ಡಾ.ಸಿ.ಅನ್ನಪೂರ್ಣಮ್ಮನವರು ತಮ್ಮ ಸಾಹಿತ್ಯ ರಚನೆ ಮತ್ತು ಸಾಮಾಜಿಕ ಚಟುವಟಿಕೆಗಳಿಂದ ವಿಶಿಷ್ಟ ಸ್ಥಾನ ಪಡೆದ ನಾಡಿನ ಹೆಸರಾಂತ ವೈದ್ಯ ಲೇಖಕರು. ಡಾ.ಆಶಾ ಬೆನಕಪ್ಪ ನಿಮ್ಮ ಮನೆಯ ದೀಪ, ನಿಮ್ಮ ಮಗು ದಾಂಪತ್ಯದಂಗಳದ ಬೆಳದಿಂಗಳು…ಕೃತಿಗಳ ಕೊಡುಗೆಯನ್ನು ವೈದ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಡಾ.ಪದ್ಮಿನಿ ಪ್ರಸಾದ್ ಲೈಂಗಿಕ ವಿಜ್ಞಾನದ ಬರವಣಿಗೆಯಲ್ಲಿ ಹೆಸರು ಗಳಿಸಿದವರು.
ಡಾ.ಲೀಲಾವತಿ ದೇವದಾಸ್ ರವರು 15 ಪುಸ್ತಕ
ಹೊರತಂದಿದ್ದಾರೆ. ನಾನು ಗೌರಿಯ ಗರ್ಭಕೋಶ, ಹಳಿ ತಪ್ಪಿದ ಹೆರಿಗೆ, ಹೆಣ್ಣೆ ನಿನ್ನ ಆರೋಗ್ಯ ಕಾಪಾಡಿಕೊ, ಹೆರಿಗೆ ಜನಾದರಣೀಯವಾಗಿವೆ. ಡಾ.ಕಾಮಿನಿ ರಾವ್ ಬಂಜೆತನ ತಪಾಸಣೆ, ನಿವಾರಣೆ ಪುಸ್ತಕವನ್ನು ಬರೆದಿದ್ದಾರೆ. ವೈದ್ಯ ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಇತರೆ ಲೇಖಕಿಯರೆಂದರೆ
ಡಾ.ಗೀತಾ ಪ್ರಭು ಶಂಕರ, ಡಾ.ಟಿ.ಎ.ವೀಣಾ, ಡಾ.ಎಚ್. ಆರ್. ಪದ್ಮಿನಿ, ಡಾ.ವೀಣಾ ಭಟ್,ಡಾ.ಇಂದಿರಾ ಜಯಪ್ರಕಾಶ ,ಡಾ.ಕೆ.ಎಸ್. ಶುಭ್ರತಾ, ಡಾ.ಕೆ.ಎಸ್. ಪವಿತ್ರ, ಡಾ.ಅರುಣಾ …..ಮುಂತಾದವರು.
ವೈದ್ಯ ಸಾಹಿತಿಗಳ ಸಮಸ್ಯೆ ನಿವಾರಣೆಗೆ 1986ರಲ್ಲಿ ವೈದ್ಯ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂತು. ಪ್ರಾರಂಭದಲ್ಲಿ ಅಲ್ಲಲ್ಲಿ ವಿಚಾರ ಸಂಕಿರಣ, ಸಮ್ಮೇಳನಗಳು
ಪಡೆದವು.ಡಾ.ಕರವೀರಪ್ರಭು ಕ್ಯಾಲಕೊಂಡ ರಾಜ್ಯಾಧ್ಯಕ್ಷರಾಗಿದ್ದಾಗ 2001ರಲ್ಲಿ ಧಾರವಾಡದಲ್ಲಿ ಎರಡು
ದಿನದ ಸಮ್ಮೇಳನ ಅದ್ಭುತವಾಗಿತ್ತು.ಈ ಅದ್ದೂರಿ ಸಮ್ಮೇಳನಕ್ಕೆ ಡಾ.ಪಿ.ಎಸ್. ಶಂಕರ ಸರ್ವಾಧ್ಯಕ್ಷರಾಗಿದ್ದರು.
ಅಲ್ಲಿ ನಡೆದ ‘ಮೆಡಿಕಲ್ ಪಾರ್ಲಿಮೆಂಟ್ ‘ಜನಮಾನಸದಲ್ಲಿ
ಅಚ್ಚಳಿಯದೇ ಉಳಿದಿದೆ. ಆರಂಭದಲ್ಲಿದ್ದ ಉತ್ಸಾಹ ವೈದ್ಯ ಸಾಹಿತಿಗಳಲ್ಲಿ ಉಳಿಯಲಿಲ್ಲ. ಹೀಗಾಗಿ ಈಗ ವೈದ್ಯ ಸಾಹಿತ್ಯ ಪರಿಷತ್ತು ಇದ್ದೂ ಇಲ್ಲದಂತಾಗಿದೆ.
ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯಲ್ಲಿಯ ವೈದ್ಯರು ಕನ್ನಡ ಭಾಷೆಗೆ ತೋರಿದ ಅಭಿಮಾನದಿಂದಾಗಿ ಕನ್ನಡ ವೈದ್ಯ ಬರಹಗಾರರ ವೇದಿಕೆ ರೂಪಗೊಂಡಿದ್ದು, ಮೊಟ್ಟ ಮೊದಲ ವೈದ್ಯ ಬರಹಗಾರರ ಸಮ್ಮೇಳನಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ.ಮಂಗಳೂರು ಸಮ್ಮೇಳನಕ್ಕೆ ಸಜ್ಜಾಗುತ್ತಿದೆ.ನಾಡಿನ ಎಲ್ಲ ವೈದ್ಯ ಸಾಹಿತಿಗಳು ಅಲ್ಲಿ ಸೇರಲಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಮಾದರಿಯ ಸಮ್ಮೇಳನವಾಗಬೇಕು. ಜಾತ್ರೆಯಾಗಬಾರದು ಎಂಬುದು ಎಲ್ಲ ವೈದ್ಯರ ಬಯಕೆ. ಭಾರತೀಯ ವೈದ್ಯಕೀಯ ಸಂಘದ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗಬೇಕೆಂಬುದು ವೈದ್ಯರ ಹೆಬ್ಬಯಕೆ. ಇದು ಕರಾವಳಿ ವೈದ್ಯರ ಆಸೆಯೂ ಹೌದು. ಅದಕ್ಕಾಗಿಯೇ ಮಂಗಳೂರು ಶಾಖೆಯ ತಂಡ ಟೊಂಕಕಟ್ಟಿ ನಿಂತಿದೆ. ಸಂಘಟನಾ ಚತುರ ಡಾ
ಅಣ್ಣಯ್ಯ ಕುಲಾಲ್ ಕುಲಾಲ್ ಅಂತಹ ಐಎಂಎ ನಾಯಕರು ಚೊಚ್ಚಲ ಕಾರ್ಯಕ್ರಮದ ಯಶಸ್ಸಿಗಾಗಿ ಸಂಘಟಿತ ಪ್ರಯತ್ನ ಮಾಡುತ್ತಿದ್ದಾರೆ
ಇದೇ ರಾಜ್ಯ ಸಂಘಟಿಕರ ಸಂಕಲ್ಪ.
***********
ವಿಳಾಸ:
ಡಾ.ಕರವೀರಪ್ರಭು ಕ್ಯಾಲಕೊಂಡ
ಕ್ಯಾಲಕೊಂಡ ಆಸ್ಪತ್ರೆ
ಕಾಲೇಜ ರಸ್ತೆ
ಬಾದಾಮಿ.587201
ಜಿಲ್ಲಾ:ಬಾಗಲಕೋಟೆ
ಮೊ:9448036207