ಬಂಟ್ವಾಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಜನರಿಗೆ ನೀರೊದಗಿಸುವ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್ವೆಲ್ ನದಿಯಲ್ಲಿ ನೀರಿಲ್ಲದೆ ಬರಿದಾದ ಹಿನ್ನಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದ ಪುರಸಭಾ ವ್ಯಾಪ್ತಿಯ ಮನೆಗಳಿಗೆ ನೀರು ಪೂರೈಕೆಯಿಲ್ಲದೆ ಸ್ಥಗಿತಗೊಂಡ ಕಾರಣ ಶಾಸಕ ರಾಜೇಶ್ ನಾಯಕ್ ಅವರು ಜಕ್ರಿಬೆಟ್ಟು ಜಾಕ್ವೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನೇತ್ರಾವತಿ ನದಿ ಮಧ್ಯೆ ಇರುವ ಇಂಟರ್ವೆಲ್ ವೀಕ್ಷಿಸಿದ ಶಾಸಕರು ಕ.ನ.ನೀ.ಸ.ಒ.ಮಂಡಳಿಯ ಇಂಜಿನಿಯರ್ ಶೋಭಾಲಕ್ಷ್ಮಿ ಹಾಗೂ ಪುರಸಭೆ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಅವರ ಜೊತೆ ಮಾತುಕತೆ ನಡೆಸಿ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜೇಶ್ ನಾಯಕ್ ನದಿಯಲ್ಲಿ ನೀರಿನ ಮಟ್ಟ ಕುಸಿದ ಕಾರಣ ಸಮಗ್ರ ಕುಡಿಯುವ ನೀರಿನ ಯೋಜನೆಯ ಜಾಕ್ವೆಲ್ ಮೂಲಕ ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ. ಆದ್ದರಿದ ಸದ್ಯಕ್ಕೆ ಇಂಟರ್ವೆಲ್ ಬಳಿ ಬಂಡ್ ಹಾಕಿ ನೀರು ಸಂಗ್ರಹಿಸಿ ಪಂಪ್ ಮಾಡಲಾಗುವುದು, ಅಲ್ಲದೆ ಹಳೆ ಜಾಕ್ವೆಲ್ ಬಳಿ ನದಿಯಲ್ಲಿ ಸಾಕಷ್ಟು ನೀರಿರುವ ಬಗ್ಗೆ ಮಾಹಿತಿ ಇದ್ದು ಅದನ್ನು ಕೊಡುವ ಬಗ್ಗೆ ಇಂಜಿನಿಯರ್ಗಳಿಗೆ ಸೂಚಿಸಲಾಗಿದೆ. ಜನರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಈ ಸಂದರ್ಭ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ಭಾಸ್ಕರ್ ಟೈಲರ್, ಎಂಜಿನಿಯರ್ ತೇಜೋಮೂರ್ತಿ ಪ್ರಮುಖರಾದ ಸುದರ್ಶನ ಬಜ ಮೊದಲಾದವರು ಹಾಜರಿದ್ದರು.