
ಬಂಟ್ವಾಳ: ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇತ್ತೀಚೆಗೆ ತಾಲೂಕಿನ 10 ಕಡೆಗಳಲ್ಲಿ ನೋಂದಾವಣಿ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಯಶಸ್ವಿಯಾಗಿದ್ದು ರಾಜ್ಯಮಟ್ಟದಲ್ಲಿ ಬಂಟ್ವಾಳ ತಾಲೂಕು ಗುರುತಿಸಿಕೊಳ್ಳುವಂತಾಗಿದೆ ಎಂದು ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ತಿಳಿಸಿದ್ದಾರೆ.
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿ 576 ಫಲಾನುಭವಿಗಳು ಶಿಬಿರದಲ್ಲಿ ಭಾಗಿಯಾಗಿದ್ದು 84 ಹೊಸ ಅರ್ಜಿಗಳು ಬಂದಿವೆ. ಬಂಟ್ವಾಳ ತಾಲೂಕಿನಲ್ಲಿ 2024ರ ಡಿಸೆಂಬರ್ ಅಂತ್ಯದವರೆಗೆ 70093ಮಂದಿ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೊಂದಾಯಿಸಿದ್ದು ಇವರಲ್ಲಿ 67388 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಮೊತ್ತ ಜಮೆಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಶಿಬಿರದಲ್ಲಿ ಒಟ್ಟು 795 ಅರ್ಜಿಗಳು ಬಂದಿದ್ದು 538ಅರ್ಜಿಗಳು ವಿಲೇವಾರಿಯಾಗಿದ್ದು 256 ಅರ್ಜಿಗಳು ತನಿಖಾ ಹಂತದಲ್ಲಿದೆ ಎಂದು ತಿಳಿಸಿದರು. ಬಂಟ್ವಾಳ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಪೂರೈಸಿರುವ ನಿರಿದ್ಯೋಗಿ ಯುವಕ ಯುವತಿಯರಿಗೆ ಜ.16ರಂದು ನೋಂದಾವಣೆ ಪ್ರಕ್ರಿಯೆಯನ್ನು ತಾಲೂಕು ಪಂಚಾಯತಿ ಎಸ್ಜೆಎಸ್ಆರ್ವೈ ಸಭಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು ನಿರುದ್ಯೋಗಿ ಯುವಕ ಯುವತಿಯರು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಜಯಂತಿ ಪೂಜಾರಿ ತಿಳಿಸಿದ್ದಾರೆ.
ಧರ್ಮಸ್ಥಳ- ಮಂಗಳೂರು, ಉಪ್ಪಿನಂಗಡಿ- ಮಂಗಳೂರಿ ಬಸ್ಸುಗಳು ನಿಗದಿತ ತಂಗುದಾಣದಲ್ಲಿ ಬಸ್ಸು ನಿಲುಗಡೆಗೊಳಿಸದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಕರ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಗೊಳಿಸಿರುವುದಾಗಿ ತಿಳಿಸಿದ್ದಾರೆ.
