
ಬಂಟ್ವಾಳ: ಧರ್ಮ ಹಾಗೂ ಸಂಸ್ಕೃತಿ ಜೊತೆಗೆ ಸಾಗಬೇಕಾದರೆ ಸಂಸ್ಕಾರ ಬೇಕು. ಅದನ್ನು ಸಾಧಿಸಲು ಇರುವ ಸುಲಭದ ದಾರಿ ಭಜನೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಶ್ರೀ ಮೂಕಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ ಬ್ರಹ್ಮರಕೂಟ್ಲು ಇದರ 53ನೇ ವರ್ಷದ ಏಕಹಾ ಭಜನಾ ಮಹೋತ್ಸವದ ಪ್ರಯುಕ್ತ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವೇದ, ಉಪನಿಷತ್ತಿನ ಸಾರವನ್ನು ಭಜನೆಯಿಂದ ತಿಳಿಯಲು ಸಾಧ್ಯವಿದೆ. ರಾಮನ ಆದರ್ಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಆಗ ಸಂಸ್ಕಾರ, ಸಂಸ್ಕೃತಿ ಉಳಿಯಲು ಸಾಧ್ಯವಿದೆ.
ರಾಮರಸ ತುಂಬಿದಾಗ ಸಮಾಜದಲ್ಲಿ ಪರಿವರ್ತನೆಯಾಗಲು ಸಾಧ್ಯವಿದೆ. ಮೊದಲು ನಾವು ಪರಿವರ್ತನೆಯಾಗಿ ಸಮಾಜವನ್ನು ಪರಿವರ್ತಿಸಬೇಕು ಭಗವಂತನ ಅನುಸಂಧಾನವಾಗಲು ಭಜನೆಯಿಂದ ಸಾಧ್ಯ ಎಂದು ತಿಳಿಸಿದರು.

ಮುಖ್ಯ ಅತಿಥಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಭಜನೆಯಿಂದ ಸಾಮಾನ್ಯ ವ್ಯಕ್ತಿಗೂ ದೇವರನ್ನು ಒಲಿಸಲು ಸಾಧ್ಯವಿದೆ. ಜ್ಞಾನದ ಕೊರತೆ ಇದ್ದವನಿಗೆ ದೇವರ ಭಯ ಭಕ್ತಿ ಹೆಚ್ಚು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನರು ಯಕ್ಷಗಾನದ ಮೂಲಕ ಪುರಾಣವನ್ನು ತಿಳಿದು ಕೊಂಡಿದ್ದಾರೆ. ರಾಮನ ನಡಾವಳಿಕೆಯನ್ನು ಭಾಷಣಕ್ಕೆ ಸೀಮಿತಗೊಳಿಸದೆ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾಜ ಸೇವಕ ನಾರಯಣ ಹೊಳ್ಳ ಹೊಳ್ಳರಬೈಲು ಗುತ್ತು ಮಾತನಾಡಿ ಧಾರ್ಮಿಕ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಆತ್ಮೋದ್ಧಾರ ದ ಕೆಲಸ ಮಾಡಬೇಕು. ಎಲ್ಲ ಧರ್ಮವನ್ನು ಗೌರವಿಸಿ, ನಮ್ಮಧರ್ಮವನ್ನು ಪ್ರೀತಿಸಿ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮನೋಜ್ ಕನಪಾಡಿ, ಸದಾಶಿವ ಡಿ. ತುಂಬೆ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ರಶ್ಮಿತಾ ಭಂಡಾರಿಯವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿಶ್ವ ಹಿಂದೂ ಪರಿಷತ್ ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಳ್ಳ ಅಮ್ಟಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ
ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ ಕೊಟ್ಟರಿ ಮಾಡಂಗೆ
ಗೌರವ ಸಲಹೆಗಾರ ಶಶಿಧರ ಬ್ರಹ್ಮರಕೂಟ್ಲು
ಉತ್ಸವ ಸಮಿತಿ ಅಧ್ಯಕ್ಷ ಕವಿರಾಜ್ ಚಂದ್ರಿಗೆ ಮೂಕಾಂಬಿಕ ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಆನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ಮಂದಿರದ ಅಧ್ಯಕ್ಷ ನವೀನ್ ಬಂಗೇರ ಪಲ್ಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಮಾಜಮುಖಿ ಹಾಗೂ ಧಾರ್ಮಿಕ ಚಿಂತನೆಯನ್ನಿಟ್ಟುಕೊಂಡು ಗ್ರಾಮಸ್ಥರ ಸಹಕಾರದೊಂದಿಗೆ ಭಜನಾ ಮಂದಿರ ಮುನ್ನಡೆಯುತ್ತಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಹೇಮಂತ್ ಸನಿಲ್ ಸ್ವಾಗತಿಸಿದರು. ಸಂದೇಶ್ ದರಿಬಾಗಿಲು ವಂದಿಸಿದರು.
ಎಚ್ ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.
