ಎಡಪದವು: ಉಡುಪಿಯ ನಂದಿಕೂರಿನಿಂದ ಕಾಸರಗೋಡಿಗೆ 400 ಕೆ.ವಿ ವಿದ್ಯುತ್ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಎಸ್ಒಪಿ ನಿಯಮಗಳನ್ನು ಗಾಳಿಗೆ ತೂರಿ, ಖಾಸಗಿ ಜಮೀನು ಮಾಲಿಕರ ಒಪ್ಪಿಗೆಯನ್ನು ಪಡೆಯದೆ, ಗುತ್ತಿಗೆ ಸಂಸ್ಥೆ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಿ, ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು, ಟವರ್ ನಿರ್ಮಿಸಲು ಹೊಂಡಗಳನ್ನು ತೋಡಿದ ಘಟನೆ ಮಂಗಳೂರು ತಾಲೂಕು ವ್ಯಾಪ್ತಿಯ ಎಡಪದವಿನ ಕೋರ್ಡಲ್ ಎಂಬಲ್ಲಿ ನಡೆದಿದೆ. ಟವರ್ ನಿರ್ಮಿಸುವ ಬಗ್ಗೆ ಯಾವುದೇ ನೋಟೀಸ್ ನೀಡದೆ, ತಮ್ಮ ಅನುಮತಿಯನ್ನು ಪಡೆಯದೇ ಖಾಸಗಿ ಜಮೀನಿನಲ್ಲಿ ಹೊಂಡ ತೋಡಿ, ಖಾಸಗಿ ಜಮೀನಿಗೆ ಸೇರಿದ ಖದೀಂ ಕುಮ್ಕಿ ಜಮೀನಿನಲ್ಲಿ ರಸ್ತೆ ನಿರ್ಮಿಸಿರುವುದರಿಂದ ಜಮೀನಿನ ಮಾಲಕರು ಹೊಂಡಗಳನ್ನು ಮುಚ್ಚಿ ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಡಪದವಿನ ಕೋರ್ಡೆಲ್ ನಿವಾಸಿಗಳಾದ ಶಿವಪ್ರಸಾದ್ ಹಾಗೂ ಜಯಚಂದ್ರ ಸಂತ್ರಸ್ತ ರೈತರು. ಶಿವಪ್ರಸಾದ್ ಅವರ ಖಾಸಗಿ ಜಮೀನಿನಲ್ಲಿ ಅವರ ಅನುಮತಿಯನ್ನು ಪಡೆಯದೇ ಮರಗಳನ್ನು ಕಡಿದು, ಟವರ್ ನಿರ್ಮಿಸಲು ಹೊಂಡಗಳನ್ನು ತೋಡಿದ್ದಾರೆ. ಜಯಚಂದ್ರ ಅವರ ಖದೀಂ ಕುಮ್ಕಿ ಜಮೀನಿನಲ್ಲಿ ಯಾವುದೇ ಅನುಮತಿಯನ್ನು ಪಡೆಯದೆ ರಸ್ತೆಯನ್ನ ನಿರ್ಮಿಸಿಕೊಂಡಿದ್ದಾರೆ. ಟವರ್ ನಿರ್ಮಾಣಗೊಂಡರೆ ಇವರ ತೋಟ ಹಾಗೂ ಕಾಡಿನ ಮರಗಳ ಮಧ್ಯೆಯೇ ವಿದ್ಯುತ್ ತಂತಿ ಹಾದು ಹೋಗಲಿದೆ.
ಕೆಲವು ವರ್ಷಗಳ ಹಿಂದೆ ಟವರ್ ನಿರ್ಮಿಸುವುದಾಗಿ ಶಿವಪ್ರಸಾದ್ ಅವರಿಗೆ ನೋಟಿಸೋಂದು ಬಂದಿತ್ತು. ಈ ಬಗ್ಗೆ ಸರಿಯಾದ ವಿವರಣೆ ನೀಡುವಂತೆ ತಮ್ಮ ವಕೀಲರ ಮೂಲಕ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದ್ದು ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಸ್ಟೆರ್ಲೈಟ್ ಕಂಪೆನಿಯ ಅಧಿಕಾರಿಗಳು ಸಂರ್ಪಸಿ ಟವರ್ ನಿರ್ಮಿಸುವುದಾಗಿ ಹೇಳಿದ್ದರೂ ಒಪ್ಪಿಗೆಯನ್ನು ನೀಡಿರಲಿಲ್ಲ. ಆದರೂ ತನ್ನ ವರ್ಗ ಜಮೀನಿನಲ್ಲಿ ಟವರ್ ನಿಮಾಣಕ್ಕೆ ಮರಗಳನ್ನು ಕಡಿದು ನೆಲಸಮತಟ್ಟುಗೊಳಿಸಿ ಹೊಂಡ ತೋಡಿರುವುದಾಗಿ ಶಿವಪ್ರಸಾದ್ ಆರೋಪಿಸಿದ್ದಾರೆ. ಕಂಪೆನಿಯ ಈ ಬಲತ್ಕಾರದ ನಿರ್ಧಾರದಿಂದ ಆಕ್ರೋಶಗೊಂಡಿರುವ ಅವರು ಹೊಂಡಗಳನ್ನು ಮುಚ್ಚಿ ತನ್ನ ಜಮೀನು ಪ್ರವೇಶ ಮಾಡದಂತೆ ಆಳದ ಚರಂಡಿಗಳನ್ನು ನಿರ್ಮಿಸಿದ್ದಾರೆ. ಆದರೆ ಅವರದೇ ಕುಮ್ಕೀ ಜಮೀನಿನಲ್ಲಿ ಟವರ್ ನಿರ್ಮಿಸುವ ಹಠಕ್ಕೆ ಕಂಪನಿ ಬಿದ್ದಿದೆ. ಇದರ ಜೊತೆಗೆ ಟವರ್ ನಿರ್ಮಾಣಕ್ಕೆ ಬೇಕಾದ ಸರಕುಗಳನ್ನು ತರಲು ತಮ್ಮ ಕುಮ್ಕಿ ಜಮೀನಿನಲ್ಲಿಯೇ ಅಕ್ರಮವಾಗಿ ಮರಗಳನ್ನು ಕಡಿದು, ರಸ್ತೆ ನಿರ್ಮಿಸಿಕೊಂಡಿದೆ ಎಂದು ಜಯಚಂದ್ರ ಕೋರ್ಡೆಲ್ ಅಳಲು ತೋಡಿಕೊಂಡಿದ್ದಾರೆ.
ಏರ್ಪೋರ್ಟ್ ಹೈಟ್ ಕ್ಲಿಯರೆನ್ಸ್ ಇಲ್ಲ:
ಎಡಪದವು ಗ್ರಾಮ ಬಜ್ಪೆ ಏರ್ಪೋರ್ಟ್ಗೆ ಸನಿಹದಲ್ಲಿರುವುದರಿಂದ ಈ ಭಾಗದ ಜಮೀನಿನಲ್ಲಿ 135ಮೀಟರ್ಗಿಂತ ಎತ್ತರದ ಕಟ್ಟಡ ಅಥವಾ ಟವರ್ ನಿರ್ಮಾಣ ಅಥವಾ ಪವರ್ಲೈನ್ ಎಳೆಯುವಂತಿಲ್ಲ. ಕಟ್ಟಡ, ಟವರ್ ನಿರ್ಮಾಣ ಆಗಬೇಕಾದರೆ ಏರ್ಪೋರ್ಟ್ನ ನಿರಾಕ್ಷೇಪಣಾ ಪತ್ರ ಬೇಕು. ಈಗಾಗಲೇ ಈ ಜಾಗದಲ್ಲಿ ಇರುವಂತಹ ಜಿಯೋ ಟವರನ್ನು ತೆಗೆಯಲಾಗುತ್ತಿದೆ. ಮತ್ತು ಬಸ್ತಿಗುಡ್ಡೆಯಲ್ಲಿ ಚರ್ಚ್ನವರು 5 ಅಂತಸ್ತಿನ ಕಟ್ಟಡ ನಿರ್ಮಿಸಲು ಏರ್ಪೋರ್ಟ್ನಿಂದ ಅನುಮತಿ ಪಡೆಯಲು ಅರ್ಜಿ ಹಾಕಿದಾಗ 2 ಅಂತಸ್ತಿನ ಕಟ್ಟಡ ನಿರ್ಮಿಸಲು ಮಾತ್ರ ಅನುಮತಿ ನೀಡಿದ್ದಾರೆ. ಈ ಪ್ರದೇಶ ಸಮುದ್ರ ಮಟ್ಟದಿಂದ 96.99 ಮೀಟರ್ ಎತ್ತರದಲ್ಲಿರುವುದರಿಂದ 40 ಮೀಟರ್ನಷ್ಟು ಮಾತ್ರ ಎತ್ತರದ ಕಟ್ಟಡ ಅಥವಾ ಟವರ್ ನಿರ್ಮಿಸಲು ಸಾಧ್ಯ. ಆದರೆ ಕಂಪೆನಿ ವಿದ್ಯುತ್ ತಂತಿ ಅಳವಡಿಸಲು 146 ಮೀಟರ್ ಎತ್ತರದ ಟವರ್ ನಿರ್ಮಿಸುತ್ತಿದೆ. ಈ ಸ್ಥಳದಲ್ಲಿ ಏರ್ಪೋರ್ಟ್ನವರ ಅನುಮತಿ ಸಿಗದ ಕಾರಣ ಕಂಪೆನಿಯವರು ಗುರುಪುರ ನದಿಯ ಹತ್ತಿರದ ಸ್ಥಳದ ಲೊಕೇಶನನ್ನು ಕೊಟ್ಟು ಏರ್ಪೋರ್ಟ್ನವರಿಗೆ ತಪ್ಪು ಮಾಹಿತಿ ನೀಡಿ ಈ ಸ್ಥಳದಲ್ಲಿ ಟವರ್ ನಿರ್ಮಿಸುತ್ತಿದೆ ಎಂದು ಹೋರಾಟಗಾರ ಕೃಷ್ಣ ಪ್ರಸಾದ್ ತಂತ್ರಿ ಆರೋಪಿಸಿದ್ದಾರೆ. ಈ ಬಗ್ಗೆ ಸಹಾಯಕ ಆಯುಕ್ತರು ಹಾಗೂ ಏರ್ಪೋರ್ಟ್ನವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
………
400 ಕೆ.ವಿ ವಿದ್ಯುತ್ ತಂತಿ ಅಳವಡಿಸಲುಗುತ್ತಿಗೆ ಪಡೆದಿರುವ ಸ್ಟೆರ್ಲೈಟ್ ಕಂಪೆನಿಯ ಬಲತ್ಕಾರದ ಕಾಮಗಾರಿಯ ವಿರುದ್ದ ನ್ಯಾಯಾಂಗ ಹೋರಾಟ ಹಾಗೂ ಸಂಘಟನಾತ್ಮಕ ಹೋರಾಟ ನಡೆಸಲಾಗುತ್ತಿದೆ. ಹೈಕೋರ್ಟ್ನಲ್ಲಿ 4 ವರ್ಷದ ಹಿಂದೆ ಆರಂಭಿಸಿದ ಹೋರಾಟ ಈಗಲೂ ಇದೆ. ಈ ಸ್ಥಳದಲ್ಲಿ ಜಮೀನಿನ ಮಾಲಕರ ಒಪ್ಪಿಗೆ ಇಲ್ಲದೇ ಇದ್ದರೂ ಅವರು ಇಲ್ಲದ ಸಂದರ್ಭದಲ್ಲಿ ಬಂದು ಹೊಂಡ ತೋಡಿದ್ದಾರೆ. ಈ ಬಗ್ಗೆ ಮಂಗಳೂರಿನ ಮಿನಿ ವಿಧಾನ ಸೌಧದ ಮುಂದೆ ಹೋರಾಟ ನಡೆಸಲಾಗುವುದು- ದಯಾನಂದ ಶೆಟ್ಟಿ, ಅಧ್ಯಕ್ಷರು, ರೈತಸಂಘ ಹಸಿರು ಸೇನೆ, ಮಂಗಳೂರು ತಾಲೂಕು
……….
400 ಕೆ.ವಿ ವಿದ್ಯುತ್ ಟವರ್ ನಿರ್ಮಿಸುವ ಬಗ್ಗೆ ರೈತರು, ರೈತ ಸಂಘ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದರೂ ಈ ಜಿಲ್ಲೆಯ ಜನಪತ್ರಿನಿಧಿಗಳು, ಕಣ್ಣು, ಕಿವಿ ಮುಚ್ಚಿ ಕುಳಿತ್ತಿದ್ದಾರೆ. ಕಾನೂನನ್ನು ರಕ್ಷಣೆ ಮಾಡಬೇಕಾದವರೂ ಕಾನೂನನ್ನು ಕೈಗೆತ್ತಿಕೊಂಡು ಪೊಲೀಸ್ ಇಲಾಖೆಯ ಮೂಲಕ ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದರ ವಿರಿದ್ಧ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸದ್ದೇವೆ- ಮನೋಹರ ಶೆಟ್ಟಿ ರಾಜ್ಯ ಕಾರ್ಯದರ್ಶಿ ರೈತ ಸಂಘ ಹಸಿರು ಸೇನೆ