

ಬಂಟ್ವಾಳ: ಪುತ್ತೂರು ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರದ ವತಿಯಿಂದ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ನೃತ್ಯ ಧಾರ ಸಮಾರಂಭದಲ್ಲಿ ಯಕ್ಷಗಾನದ ಹಾಸ್ಯ ಕಲಾವಿದ ರಸಿಕರತ್ನ ದಿ| ನಯನಕುಮಾರ್ ಸ್ಮರಣಾರ್ಥ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಮರಣೋತ್ತರ ಕಲಾನಯನ ಪ್ರಶಸ್ತಿ ಪ್ರದಾನ ಮಾಡಲಾಯಿತು.



ಸಮಾರಂಭದಲ್ಲಿ ಮಂಗಳೂರಿನ ಧ್ವನಿ ಮತ್ತು ಬೆಳಕು ಸಂಯೋಜಕ ಮೋಹನ್ ದಂಪತಿಯನ್ನು ಸಮ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಮಾತನಾಡಿ, ನೃತ್ಯ, ಸಂಗೀತ, ಯಕ್ಷಗಾನ ಹಾಗೂ ಭಜನೆಯು ಭಾರತೀಯ ಸಂಸ್ಕೃತಿಯ ಪ್ರಮುಖ ಕಲೆಗಳಾಗಿದ್ದು, ಇದನ್ನು ಮಕ್ಕಳಿಗೆ ಕಲಿಸಿದಾಗ ಅವರು ಸಂಸ್ಕಾರಯುತವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಕ್ಕಳ ಕಲಿಕೆಯನ್ನು ಪೋಷಕರು ಯಾವತ್ತೂ ಕೂಡ ಅರ್ಧದಲ್ಲಿ ನಿಲ್ಲಿಸದೆ ಉತ್ತಮ ಕಲಾವಿದರಾಗಿ ರೂಪಿಸಿ ರಂಗಪ್ರವೇಶ ಮಾಡಿಸಬೇಕು. ಜತೆಗೆ ಮಕ್ಕಳನ್ನು ನಿರಂತರವಾಗಿ ದೇವಸ್ಥಾನಕ್ಕೆ ಹೋಗುವಂತೆ ಪ್ರೇರಣೆ ನೀಡಬೇಕು ಎಂದರು.


ಮುಖ್ಯಅತಿಥಿಗಳಾದ ಪತ್ರಿಕೋದ್ಯಮಿ ವಾಲ್ಟರ್ ನಂದಳಿಕೆ ಹಾಗೂ ಬಂಟ್ವಾಳದ ಯುವ ಉದ್ಯಮಿ ಅವಿನಾಶ್ ಕಾಮತ್ ಅವರು ಮಾತನಾಡಿ, ಸಂಗೀತ ಹಾಗೂ ನೃತ್ಯ ಜತೆಯಾದಾಗ ಅದರ ವೈಭವವೇ ಬೇರೆಯಾಗಿದ್ದು, ಪೋಷಕರು ಮಕ್ಕಳಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಎರಡು ಮಹಾನ್ ಚೇತನಗಳ ಹೆಸರಿನ ಈ ಸಮಾರಂಭದಲ್ಲಿ ಭಾಗವಹಿಸುವುದು ಯೋಗವೇ ಸರಿ ಎಂದರು.
ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರ ಮರಣೋತ್ತರ ಪ್ರಶಸ್ತಿಯನ್ನು ಅವರ ಪತ್ನಿ ಆನಂದಿ ಆಳ್ವ ಅವರಿಗೆ ಮನೆಗೆ ತೆರಳಿ ಪ್ರದಾನ ಮಾಡಲಾಯಿತು. ಕೇಂದ್ರದ ಸಹಶಿಕ್ಷಕಿಯರು ಹಾಗೂ ಹಾಗೂ ಶಿಷ್ಯವೇತನಕ್ಕೆ ಆಯ್ಕೆಯಾದ ಶ್ರದ್ಧಾ ಕಲ್ಲಡ್ಕ, ಯಶ್ವಿತಾ, ಶ್ರಮ್ಯಾ ಕಲ್ಲಡ್ಕ, ಶ್ರಮಾ ಮೆಲ್ಕಾರ್ ಅವರನ್ನು ಗೌರವಿಸಲಾಯಿತು. ಕೇಂದ್ರದ ನೃತ್ಯ ನಿರ್ದೇಶಕಿ ವಿದುಷಿ ರೋಹಿಣಿ ಉದಯ್ ಅವರು ಪ್ರಸ್ತಾವನೆಗೈದರು. ಸಂಚಾಲಕ ಉದಯ ವೆಂಕಟೇಶ್ ಭಟ್ ಸ್ವಾಗತಿಸಿದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು.
