ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳದ ಆಶ್ರಯದಲ್ಲಿ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಸಂಭ್ರಮದಿಂದ ನಡೆಯಿತು.
ತೊಡಂಬಿಲ ಚರ್ಚಿನ ಧರ್ಮ ಗುರುಗಳಾದ ವಂ. ಆಂಟೋನಿ ಲೋಬೊ ಕ್ರಿಸ್ಮಸ್ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ ಪರರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ನಮ್ಮಲ್ಲಿ ಸಂತೃಪ್ತಿ ಕಾಣಬಹುದು. ನಮ್ಮ ಮನೋಸ್ಥಿತಿ, ಹಣಸ್ಥಿತಿ ಹಾಗೂ ಪರಿಸ್ಥಿತಿ ಯನ್ನು ಅರಿತುಕೊಂಡು, ಹತೋಟಿಯಲ್ಲಿಟ್ಟುಕೊಂಡು ಮುಂದುವರಿದಾಗ ಬದುಕಿಗೆ ಹೊಸ ರೂಪವನ್ನು ಕೊಡಲು ಮತ್ತು ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ . ಮಾತ್ರವಲ್ಲದೆ, ಜೀವನದ ಯಶಸ್ಸಿಗೆ ಒಂದಷ್ಟು ಸೂತ್ರಗಳನ್ನು ಹೇಳುವ ಮುಖೇನ ಕ್ರಿಸ್ಮಸ್ ಸಂದೇಶ ನೀಡಿ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರಿಸ್ಮಸ್ ಪ್ರಧಾನ ಸಂಯೋಜಕ ಅರುಣ್ ಪೀಟರ್ ಪಿಂಟೋ ಶುಭ ಹಾರೈಸಿದರು. ವಾಲ್ಟರ್ ನೊರಾನ್ಹಾ ಮತ್ತು ಡೊನಾಲ್ಡ್ ಬಂಟ್ವಾಳ್ ಅತಿಥಿಗಳ ಪರಿಚಯ ಮಾಡಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಗೋಳ್ತಮಜಲು ಮೊಹಮ್ಮದ ಹನೀಫ್ ಅವರನ್ನು ಅಭಿನಂದಿಸಲಾಯಿತು.
ಪೂರ್ವ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಕ್ರಿಸ್ಮಸ್ ಆಚರಣೆಯಲ್ಲಿ ಸೇವಾ ಕಾರ್ಯಕ್ರಮವಾಗಿ ಭಂಡಾರಿಬೆಟ್ಟು ನಿವಾಸಿಯೋರ್ವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ೧೦ ಸಾವಿರ ರೂಪಾಯಿಯ ಚೆಕ್ ಹಸ್ತಾಂತರಿಸಲಾಯಿತು. ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರಿಸ್ಮಸ್ ಸಂಭ್ರಮದ ಆತಿಥ್ಯ ವಹಿಸಿದ ಡೊನಾಲ್ಡ್ ಬಂಟ್ವಾಳ್ , ವಾಲ್ಟರ್ ನೊರಾನ್ಹಾ, ಪಿ.ಜೆ. ರೋಡ್ರಿಗೆಸ್ , ಹೆನ್ರಿ ಪಿರೇರಾ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ದೇವಿಕಾ ದಾಮೋದರ್, ಕೋಶಾಧಿಕಾರಿ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು. ಪಿ.ಜೆ. ರೋಡ್ರಿಗೆಸ್ ವಂದಿಸಿದರು. ಕ್ರಿಸ್ಮಸ್ ಅಂಗವಾಗಿ ಲಿಯೋ ಮತ್ತು ಲಯನ್ಸ್ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.