
ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿ ಸಂಗೀತ ತರಗತಿಯ ವಾರ್ಷಿಕೋತ್ಸವ ಭಾನುವಾರ ಸಂಜೆ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಿವಾಂಜಲಿ ಕಲಾ ಕೇಂದ್ರ ಪೇರ್ಲದ ನಿರ್ದೇಶಕಿ ವಿದೂಷಿ ಕಾವ್ಯಭಟ್ ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ವೇದಿಕೆಯಾಗಿದೆ. ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಸಿಗದೇ ಹೋದಾಗ ಅವರಲ್ಲಿ ಕಲಿಯುವ ಆಸಕ್ತಿ ಕಡಿಮೆಯಾಗುತ್ತದೆ. ಆಸಕ್ತಿ ನಿರಂತರವಾಗಿಬೇಕಾದರೆ ಇಂತಹ ವೇದಿಕೆಯ ಅವಕಾಶ ಸಿಗಬೇಕಾಗಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮಾತನಾಡಿ ಕಾವ್ಯಭಟ್ ಅವರು ಉದ್ಯೋಗದ ಜೊತೆ ಭರತನಾಟ್ಯವನ್ನು ಕಲಿಸುವ ಮೂಲಕ ದೇಶಿಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಗಾಯಕಿ ಪವಿತ್ರ ವಿನಯ ಮಯ್ಯ ತುಪ್ಪೆಕಲ್ಲು, ಸಂಗೀತ ವಿದ್ವಾನ್ ಕೃಷ್ಣಾಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದೇವರ ನಾಮ, ವಿದ್ವಾನ್ ಕೃಷ್ಣಾಚಾರ್ಯ ಅವರಿಂದ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಗೀತೆ ನಡೆಯಿತು.
