ಬಂಟ್ವಾಳ: ಅವಧಿ ಮೀರಿದ ಮತ್ತು ಅವೈಜ್ಞಾನಿಕ ಟೋಲ್ ಸಂಗ್ರಹವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬಂಟ್ವಾಳ ಇದರ ನೇತೃತ್ವದಲ್ಲಿ ಸಾರ್ವಜನಿಕ ಬೃಹತ್ ಪ್ರತಿಭಟನೆ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ನಡೆಯಿತು.


ಪ್ರತಿಭಟನಕಾರರನ್ನು ಉದ್ದೇಶಿಸಿ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ಇದೊಂದು ಅಪಾಯಕಾರಿ ಟೋಲ್ ಆಗಿ ಪರಿಣಮಿಸುತ್ತಿದೆ. ಇಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಚುನಾಯಿತ ಪ್ರತಿನಿಧಿಗಳು ಗಮನ ಹರಿಸ ಬೇಕು ಎಂದು ತಿಳಿಸಿದರು. ಡಬ್ಬಲ್ ಇಂಜಿನ್‌ನ ಸರಕಾರ ಸ್ಥಗಿತಗೊಂಡಿದ್ದು ಪತನಗೊಳ್ಳುವ ಸ್ಥಿತಿಯಲ್ಲಿದೆ. ಪೆಟ್ರೋಲ್ ಡಿಸೇಲ್ ಹಾಗೂ ದಿನ ಬಳಕೆಯ ವಸ್ತುಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಜನರನ್ನು ದರೋಡೆ ಮಾಡುವ ಸರಕಾರ ಸುತ್ತಮುತ್ತಲು ಯಾವ ದೇಶದಲ್ಲೂ ಇಲ್ಲ ಎಂದು ಟೀಕಿಸಿದರು. ಈ ಹೋರಾಟದಲ್ಲಿ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಸರಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು, ಬಡವರ ಜೇಬಿಗೆ ಕೈ ಹಾಕಿ ಸರಕಾರ ಶ್ರೀಮಂತರ ಕಿಸೆಗೆ ಹಾಕುತ್ತಿದೆ, ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.


ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ಪ್ರಭಾಕರ ದೈವಗುಡ್ಡೆ ಮಾತನಾಡಿ ಗಣತಿಯಂತೆ ದೇಶಾದ್ಯಂತ 279 ಮಿಲಿಯನ್ ವಾಹನಗಳು ಒಡಾಟ ನಡೆಸುತ್ತಿದ್ದು ರಸ್ತೆ ನಿರ್ವಹಣೆ ವೆಚ್ಚ ಎಂದು ಪ್ರತೀ ಲೀಟರ್ ಪೆಟ್ರೋಲ್, ಡಿಸೇಲ್‌ನಿಂದ 7 ರೂಪಾಯಿಯನ್ನು ಪಡೆಯುತ್ತಾರೆ. ಒಂದೆಡೆ ತೆರಿಗೆ, ಇನ್ನೊಂದೆಡೆ ವಿಮೆ ಪಾವತಿ ಮಾಡುತ್ತೇವೆ. ಅದರ ಜೊತೆಗೆ ಟೋಲ್ ಸುಂಕವನ್ನು ಪಡೆದು ಜನರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾ ಪಂಚಾಯತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ಪೆಟ್ರೋಲ್, ಡಿಸೇಲ್ ಬೆಲೆ ಎಷ್ಟು ಏರಿಕೆಯಾದರೂ ನಾವು ನೀಡಲು ಸಿದ್ದ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಾರೆ. ಅಂತವರಿಗೆ ಲೀಟರ್‌ಗೆ 500 ರೂಪಾಯಿ ಏರಿಕೆ ಮಾಡಿ ಪೆಟ್ರೋಲ್ ಪಂಪ್‌ನಲ್ಲಿ ಪ್ರತ್ಯೇಕ ಕೌಂಟರ್ ಮಾಡಿ, ಜನ ಸಾಮಾನ್ಯರಿಗೆ ತೊಂದರೆ ನೀಡಬೇಡಿ ಎಂದರು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಪ್ರತಿಭಟನೆಯ ಹಕ್ಕನ್ನು ಕಸಿದು ಕೊಳ್ಳಲಾಗಿದೆ. ಜನರು ಮೋದಿ ಭಕ್ತಿಯನ್ನು ಬಿಟ್ಟು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಳ್ಳಿ ಎಂದರು.


ವರ್ತಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಅಣ್ಣು ಪೂಜಾರಿ, ನ್ಯಾಯವಾದಿ ಉಮೇಶ್ ಕುಮಾರ್ ವೈ, ತುಂಬೆ ಪಂಚಾಯತಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ, ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲುಕ್‌ಮನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಪ್ರಮುಖರಾದ ಪ್ರಕಾಶ್ ಶೆಟ್ಟಿ, ರಾಮಣ್ಣ ವಿಟ್ಲ, ಶೇಖರ್ ಬಿ., ಪ್ರೇಮನಾಥ್ ಕೆ., ಸುರೇಶ್ ಬಿ, ರಾಜಾ ಚೆಂಡ್ತಿಮಾರ್, ಚಿತ್ತರಂಜನ್ ಬೊಂಡಾಲ, ಹಾರೂನ್ ರಶೀದ್, ವಾಸುಪೂಜಾರಿ, ಮಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ವಕೀಲರ ಸಂಘ ಬಂಟ್ವಾಳ, ಗ್ಯಾರೇಜು ಮಾಲಕರ ಸಂಘ ಬಂಟ್ವಾಳ, ವರ್ತಕರ ಸಂಘ ಬಂಟ್ವಾಳ, ದ.ಕ. ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ ಮಾಲಕರ ಸಂಘ ಬಂಟ್ವಾಳ, ಸಣ್ಣ ಮತ್ತು ದೊಡ್ಡ ಗೂಡ್ಸ್ ಟೆಂಪೋ ಚಾಲಕರ ಸಂಘ ಬಂಟ್ವಾಳ ಸಹಿತ ನ್ಯಾಯಪರ ಹೋರಾಡುವ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡವು.